ದಲಿತರು ಬಿಜೆಪಿಯ ಹೃದಯದಲ್ಲಿದ್ದಾರೆ: ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ನ.9: 'ಬಿಜೆಪಿ ದಲಿತರ ಜೊತೆಗಿಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ, ಆದರೆ ದಲಿತರು ಬಿಜೆಪಿಯ ಹೃದಯದಲ್ಲಿದ್ದಾರೆ. ನನ್ನ ಹೃದಯದಲ್ಲೂ ದಲಿತರಿದ್ದಾರೆ. ನನ್ನ 34ವರ್ಷಗಳ ರಾಜಕಾರಣದಲ್ಲಿ ದಲಿತರ ಸಂಬಂಧ ಎಂದಿಗೂ ತಾರತಮ್ಯ ಮಾಡಿಲ್ಲ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ (C. T. Ravi) ಹೇಳಿದ್ದಾರೆ.
ಬುಧವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೋರ್ಚಾದಿಂದ ರಾಜ್ಯ ಸರಕಾರ ಮೀಸಲಾತಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಚಿಕ್ಕಮಗಳೂರು ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ವಿರೋಧ ಪಕ್ಷಗಳ ಮುಖಂಡರು ಆರೋಪಿಸುತ್ತಿದ್ದಾರೆ. ಆದರೆ ಜಿಲ್ಲೆಗೆ ಮೆಡಿಕಲ್ ಕಾಲೇಜು ತರಲಾಗಿದ್ದು, ಎಲ್ಲೆಡೆ ಕಾಂಕ್ರಿಟ್ ರಸ್ತೆ ನಿಮಾರ್ಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯನ್ನೂ ನಿರ್ಮಾಣವಾಗುತ್ತಿದೆ. ಇವೆಲ್ಲವು ಶಾಶ್ವತ ಅಭಿವೃದ್ಧಿ ಕಾಮ ಗಾರಿಗಳಲ್ಲವೇ'' ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ''ಅಂಬೇಡ್ಕರ್ ಅವರು ಬದುಕ್ಕಿದ್ದಾಗ ಕಾಂಗ್ರೆಸ್ ಪಕ್ಷ ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದೆ. ಆ ಪಕ್ಷಕ್ಕೆ ಪರಿಶಿಷ್ಟ ಜಾತಿಯವರು ಮತ ಹಾಕಬಾರದು. ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ 1958ರಿಂದ ಮೀಸಲಾತಿಯನ್ನು ಹೆಚ್ಚಳ ಮಾಡಲು ಕಾಂಗ್ರೆಸ್ ಸರಕಾರ ಮುಂದಾಗಲಿಲ್ಲ. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಮಾಡುವ ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ಸರಕಾರ ಮಾಡಿದೆ. ಈ ಕಾರಣಕ್ಕೆ ಪರಿಶಿಷ್ಟರು ಬಿಜೆಪಿಗೆ ಮತ ಹಾಕಬೇಕು'' ಎಂದು ಕರೆ ನೀಡಿದರು.
ಶಾಸಕ ಗೂಳಿಹಟ್ಟಿ ಶೇಖರ್, ಕರ್ನಾಟಕ ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿದರು. ಬಿಜೆಪಿ ಗ್ರಾಮಮಂಡಲದ ಅಧ್ಯಕ್ಷ ಹಂಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಅಧ್ಯಕ್ಷ ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ, ಸಿಡಿಎ ಅಧ್ಯಕ್ಷ ಸಿ.ಆನಂದ್, ಬಿಜೆಪಿ ಜಿಲ್ಲಾ ವಕ್ತಾರ ದೀಪಕ್‍ದೊಡ್ಡಯ್ಯ, ಲಕ್ಷ್ಮಣನಾಯ್ಕ, ಮುತ್ತ ಯ್ಯ, ಜಿಲ್ಲಾ ಉಸ್ತುವಾರಿ ಚನ್ನಬಸವಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
''ಹುಣಸೇಹಳ್ಳಿ ಪ್ರಕರಣದಲ್ಲಿ ಕೆಲವರು ನನ್ನ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ. ನಾನು ಆ ಕ್ಷೇತ್ರದ ಶಾಸಕನಲ್ಲ. ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅವರಿಗೆ ಧಿಕ್ಕಾರ ಹಾಕಬೇಕಾದವರು ನನಗೆ ಏಕೆ ಧಿಕ್ಕಾರ ಹಾಕಿದ್ದಾರೋ ಗೊತ್ತಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡಲು ಕೆಲವರು ಷಡ್ಯಂತ್ರ ಮಾಡಿದ್ದಾರೆ. ಈ ಹುನ್ನಾರ ಜನರಿಗೆ ಅರ್ಥವಾಗಿದೆ.''
- ಸಿ.ಟಿ.ರವಿ, ಶಾಸಕ