ಇಂದು ಎಲ್ಲೆಡೆ ಜಾತೀ ವೈಭವೀಕರಣವಾಗುತ್ತಿದೆ: ಸಂಸದ ವಿ. ಶ್ರೀನಿವಾಸಪ್ರಸಾದ್

Update: 2022-11-11 18:45 GMT

ಚಾಮರಾಜನಗರ, ನ. 11:'ತಾರ್ಕಿಕ ಚಿಂತನೆಗಳು, ಸಕಾರಾತ್ಮಕ ಕೀರ್ತನೆಗಳ ಮೂಲಕ ಇಡೀ ಮನುಕುಲವನ್ನೇ ಬೆಳಗಿದ ಕನಕದಾಸರು ದಾಸಶ್ರೇಷ್ಠರಲ್ಲಿ ಅಗ್ರಗಣ್ಯರಾಗಿದ್ದಾರೆ' ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು. 

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಕನಕದಾಸ ಜಯಂತೋತ್ಸವ ಸಮಿತಿ ಮತ್ತು ಜಿಲ್ಲೆಯ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ 535ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

''ಸಾಮಾನ್ಯ ಜನರಿಗೆ ಸರಳವಾಗಿ ಅರ್ಥವಾಗುವಂತಹ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ಸನ್ಮಾರ್ಗದೆಡೆಗೆ ನಡೆಸಿದ ಸಮಾಜ ಸುಧಾರಕರಲ್ಲಿ ಕನಕದಾಸರು ಪ್ರಮುಖರಾಗಿದ್ದಾರೆ. ದೇಶದಲ್ಲಿ ಮಹಾನ್ ಪುರುಷರು, ಚಿಂತಕರು, ಸಾಧುಸಂತರು ಸಾಕಷ್ಟು ವಿಚಾರಧಾರೆಗಳನ್ನು ಬಿತ್ತಿಹೋಗಿದ್ದಾರೆ. ಆದರೆ ಅವರ ಚಿಂತನೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲದಿರುವುದು ವಿಷಾದದ ಸಂಗತಿಯಾಗಿದೆ. ಕಾಲಮಾನ, ನಾಗರೀಕತೆ ಬದಲಾದಂತೆ ನಾವೆಲ್ಲರೂ ಸಹ ಪ್ರಜ್ಞಾವಂತ ನಾಗರಿಕರಾಗಬೇಕಾಗಿದೆ'' ಎಂದರು.

''ಭಾರತದಲ್ಲಿ ಸಾವಿರಾರು ಜಾತಿ, ಉಪಜಾತಿಗಳಿವೆ. ಇಂದು ಎಲ್ಲೆಡೆ ಜಾತೀ ವೈಭವೀಕರಣವಾಗುತ್ತಿದೆ. ಇದು ಸಲ್ಲದು. ಪ್ರತಿಯೊಬ್ಬರು ಮನುಷ್ಯತ್ವ, ಸಮಾಜದ ಬಗ್ಗೆ ಚಿಂತನೆ ಮಾಡಬೇಕು. ಭಾರತ ದೇಶ ದೊಡ್ಡದು. ಆದರೆ ದೇಶದ ಜನ ದೊಡ್ಡತನವಿಲ್ಲ. ಜಾತೀಯತೆಯ ಮನಸ್ಸುಗಳು ಪರಿವರ್ತನೆಯಾಗಬೇಕು. ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುವ ಮೂಲಕ ಕನಕದಾಸರಿಗೆ ಗೌರವ ಸಲ್ಲಿಸಬೇಕು ಎಂದ ಶ್ರೀನಿವಾಸಪ್ರಸಾದ್ ಅವರು ಜಿಲ್ಲಾಕೇಂದ್ರದಲ್ಲಿ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 10 ಲಕ್ಷ ರೂ. ಗಳ ನೀಡಲಾಗುವುದು'' ಎಂದು ತಿಳಿಸಿದರು. 

ನಿವೃತ್ತ ಶಿಕ್ಷಕರಾದ ಶಿವಣ್ಣ ಇಂದ್ವಾಡಿ ಅವರು ಮುಖ್ಯ ಭಾಷಣ ಮಾಡಿ, ''ದಾಸಸಾಹಿತ್ಯದ ಪ್ರವರ್ತಕರಾಗಿದ್ದ ಕನಕದಾಸರು ಈ ಜಗತ್ತು ಕಂಡ ಶ್ರೇಷ್ಠಕವಿ, ಭಕ್ತರು, ವಾಗ್ಮೇಯಿ. ಅಖಂಡ ಕರ್ನಾಟಕದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಸಾಹಿತ್ಯ ಪ್ರಾಕಾರ ಎಂದರೇ ಅದು ದಾಸಸಾಹಿತ್ಯ. ಸುಸಂಸ್ಕೃ ತ ಸ್ವಸ್ಥ ಸಮಾಜವನ್ನು ಕಟ್ಟಲು ದಾಸಶ್ರೇಷ್ಠರು ಕೀರ್ತನೆಗಳ ಮೂಲಕ ಆಂದೋಲನವನ್ನು ಪ್ರಾರಂಭಿಸಿದರು'' ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕನಕದಾಸರು ಬಹಳ ಅರ್ಥಗರ್ಭಿತ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ತಿದ್ದಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವರು. ಅವರ ಕೀರ್ತನೆಗಳ ಸಾರವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. 

ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮಿಯವರು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ. ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಕೆ.ಎಸ್. ಸುಂದರರಾಜು, ಡಿವೈಎಸ್.ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕರಾದ ಗುರುಲಿಂಗಯ್ಯ, ಸಮಾಜದ ತಾಲೂಕು ಅಧ್ಯಕ್ಷರಾದ ಸಿ.ಎನ್. ಬಾಲರಾಜು, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.  ಆರಂಭದಲ್ಲಿ ಆರ್. ಮಹೇಂದ್ರ ಮತ್ತು ತಂಡದವರು ನಡೆಸಿಕೊಟ್ಟ ದಾಸರ ಪದಗಳು, ಕೀರ್ತನೆಗಳನ್ನು ಹಾಡಿದರು. 

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಅಂಗವಾಗಿ ನಗರದ ಪ್ರವಾಸಿಮಂದಿರದಲ್ಲಿ ವಿವಿಧ ಕಲಾತಂಡಗಳೊಡನೆ ಹೊರಟ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. 

Similar News