ನೆಲಮಂಗಲ | ಪಿತ್ರಾರ್ಜಿತ ಆಸ್ತಿ ಕಳೆದುಕೊಂಡ ಹಿನ್ನೆಲೆ; ದಯಾಮರಣ ಕೋರಿ ಪತ್ರ ಬರೆದ ಒಂದೇ ಕುಟುಂಬದ 26 ಜನ!

Update: 2022-11-14 16:15 GMT

ನೆಲಮಂಗಲ, ನ.14: ಪಿತ್ರಾರ್ಜಿತ ಆಸ್ತಿಯನ್ನ ಕಳೆದುಕೊಂಡ ಒಂದೇ ಕುಟುಂಬದ 26 ಜನ ದಯಾಮರಣ ಕೋರಿ ಪತ್ರ ಬರೆದು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಡಸೀಘಟ್ಟ ಗ್ರಾಮದಲ್ಲಿ ನಡೆದಿದೆ.

ತಡಸೀಘಟ್ಟ ಗ್ರಾಮದ ಗಂಗಹನುಮಕ್ಕ ಕುಟುಂಬದ 26 ಜನರು ದಯಾಮರಣ ಕೋರಿ ಪತ್ರ ಬರೆದಿದ್ದಾರೆ. 1981ರಲ್ಲಿ ಗಂಗಹನುಮಕ್ಕನ ತಂದೆ ದಿ. ಭೈರಣ್ಣ ಮಗಳ ಮದುವೆಗೆ ಎಂದು ತಮ್ಮ 3 ಎಕರೆ 22 ಗುಂಟೆ ಜಮೀನನ್ನು ಅದೇ ಗ್ರಾಮದ ರಾಜಗೋಪಾಲಯ್ಯ ಎಂಬ ವ್ಯಕ್ತಿಗೆ 3,500 ರೂಗಳಿಗೆ ವಾಯಿದೆ ಕ್ರಯಕ್ಕೆ ಕೊಟ್ಟಿದ್ದರು.

ಆದರೇ ರಾಜಗೋಪಾಲಯ್ಯ ನಕಲಿ ಸಹಿ ಮತ್ತು ದಾಖಲೆಗಳನ್ನ ಸೃಷ್ಟಿಸಿ ವಾಯಿದೆ ಕ್ರಯಕ್ಕೆ ಕೊಟ್ಟಿದ್ದ ಜಮೀನನ್ನು 2012ರಲ್ಲಿ ಶುದ್ಧ ಕ್ರಯ ಮಾಡಿಕೊಂಡು ತನ್ನ ಹೆಸರಿಗೆ ಮಾಡಿಸಿಕೊಂಡು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ದಯಾಮರಣ ಕೋರಿ ಪತ್ರ ಬರೆದ ಕುಟುಂಬ ಅಲ್ಲದೇ ಈ ಸಂಬಂಧ ತ್ಯಾಮಗೊಂಡ್ಲು ಠಾಣೆಯಲ್ಲಿ ಶುದ್ಧ ಕ್ರಯ ಪತ್ರದ ಮೇಲಿರುವ ಸಹಿ ನಕಲಿ, ಅದರ ಬಗ್ಗೆ ತನಿಖೆಯಾಗುವಂತೆ ದೂರು ಸಲ್ಲಿಸಿದ್ದು, ಅಲ್ಲೂ ಕೂಡ ರಾಜಗೋಪಾಲಯ್ಯ ದುಡ್ಡು ಕೊಟ್ಟು ನಮಗೆ ನ್ಯಾಯ ಸಿಗದಂತೆ ಮಾಡಿದ್ದಾರೆ. ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿ ಕುಟುಂಬದ 26 ಜನ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇಲ್ಲೂ ನ್ಯಾಯ ಸಿಗದಿದ್ದಲ್ಲಿ ಆಮರಣಾಂತ ಉಪವಾಸ ಮಾಡುವುದಾಗಿ ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.


 

Similar News