ಶಾಲೆಗಳಿಗೆ ಕೇಸರಿ ಬಣ್ಣ ವಿವಾದ: 'ಸಿಎಂ ಅಂಕಲ್' ಅಭಿಯಾನ ಆರಂಭಿಸಿದ ಕಾಂಗ್ರೆಸ್, ಬೊಮ್ಮಾಯಿಗೆ ಪ್ರಶ್ನೆಗಳ ಸುರಿಮಳೆ

Update: 2022-11-15 12:27 GMT

ಬೆಂಗಳೂರು: ಶಾಲೆಗಳಿಗೆ ಕೇಸರಿ ಬಣ್ಣ  ಬಳಿಯುವ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ  ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ  ಕಾಂಗ್ರೆಸ್ 'ಸಿಎಂ ಅಂಕಲ್' ಎಂಬ ಅಭಿಯಾನ ಆರಂಭಿಸಿದೆ. 

#ಸಿಎಂಅಂಕಲ್ ಹ್ಯಾಷ್ ಟ್ಯಾಗ್ ಬಳಸಿ, ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, 'ಶಾಲೆಗಳಿಗೆ  ಕೇಸರಿ ಬಣ್ಣಕ್ಕಿಂತ ಮೂಲ ಸೌಕರ್ಯ ಒದಗಿಸಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ. 

ಕಾಂಗ್ರೆಸ್ ನ ಸರಣಿ ಟ್ವೀಟ್ ಗಳು ಇಂತಿವೆ... 

''ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ, ಶೌಚಾಲಯವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. #ಸಿಎಂಅಂಕಲ್, ಕೇಸರಿ ಬಣ್ಣ ಬಳಿಯುವಿರಂತೆ, ಆದರೆ ಮೊದಲು ಶೌಚಾಲಯ ಕಟ್ಟಿಸಿಕೊಡಿ. ಕುಡಿಯಲು ಶುಚಿಯಾದ ನೀರು ಕೊಡಿ, ಶಾಲೆಗಳು ಮಕ್ಕಳನ್ನು ಆಕರ್ಷಿಸುವಂತೆ ಮಾಡಿಕೊಡಿ'' 

''ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ವಿವೇಕಾನಂದರ ನೆಪ ಹೇಳುವ ಸರ್ಕಾರ ವಿವೇಕಾನಂದರ ನೈಜ ತತ್ವಗಳನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲವೇಕೆ? ಜೇಮ್‌ಶೇಟ್ ಜಿ ಟಾಟಾ ಅವರ ಮೂಲಕ ಭಾರತದ ಕೈಗಾರಿಕೆ & ವೈಜ್ಞಾನಿಕ ಕ್ರಾಂತಿಗೆ ವಿವೇಕಾನಂದರು ಕಾರಣರಾಗಿದ್ದರು. #ಸಿಎಂಅಂಕಲ್ ಮಕ್ಕಳಲ್ಲಿ ವೈಜ್ಞಾನಿಕ ಮನಭಾವ ಮೂಡಿಸುವಲ್ಲಿ ತಾವು ಕೆಲಸ ಮಾಡ್ತಿಲ್ಲವೇಕೆ?''

''ಕೋವಿಡ್ ನಂತರ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಬಾಲಕಾರ್ಮಿಕರ ಸಂಖ್ಯೆ ಏರಿಕೆಯಾಗಿದೆ, ಬಾಲ್ಯವಿವಾಹವೂ ಏರಿಕೆಯಾಗಿದೆ. #ಸಿಎಂಅಂಕಲ್, ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಯೋಜನೆ ರೂಪಿಸುವುದನ್ನು ಬಿಟ್ಟು ಬಣ್ಣ ಬಣ್ಣ ಬಳಿಯುವ ಬಣ್ಣ ಬಣ್ಣದ ಮಾತಾಡಿಕೊಂಡು ಕುಳಿತಿರುವುದೇಕೆ?''

''ಸೈಕಲ್‌ಗಳಲ್ಲೂ ಹಗರಣ ನಡೆಸಿ ಕಳಪೆ ಸೈಕಲ್ ವಿತರಿಸಿದರೂ ಸರ್ಕಾರದ ಸೈಕಲ್‌ಗಳಿಂದ ಶಾಲಾ ಮಕ್ಕಳಿಗೆ ಅನುಕೂಲವಿತ್ತು. ಈಗ ಸೈಕಲ್ ಕೊಡುವುದನ್ನೇ ನಿಲ್ಲಿಸಿದ್ದೇಕೆ #ಸಿಎಂಅಂಕಲ್? ದೂರದಿಂದ ಸಮಯಕ್ಕೆ ಸರಿಯಾಗಿ ಶಾಲೆ ತಲುಪುವುದು ಹೇಗೆ? ಹಲವು ಸವಾಲುಗಳನ್ನು ಮುಂದಿಟ್ಟರೆ ಮಕ್ಕಳು ಶಿಕ್ಷಣದತ್ತ ಆಕರ್ಷಿತರಾಗುವುದು ಹೇಗೆ?''

''ಕೊರೋನಾ ನಂತರದ ಶೈಕ್ಷಣಿಕ ಬಿಕ್ಕಟ್ಟುಗಳನ್ನು ಗಮನಿಸುವುದನ್ನು ಬಿಟ್ಟು ಪಠ್ಯಪುಸ್ತಕದಲ್ಲಿ ಅವಾಂತರ ಸೃಷ್ಟಿಸಿತ್ತು ಸರ್ಕಾರ. ಶಾಲೆ ಶುರುವಾಗಿ ಅರ್ಧ ವರ್ಷ ಕಳೆದರೂ ಪಠ್ಯಪುಸ್ತಕದ ಗೊಂದಲ ಬಗೆಹರಿಸಲಿಲ್ಲ, ಮಕ್ಕಳಿಗೆ ಪಠ್ಯಪುಸ್ತಕ ನೀಡಲಿಲ್ಲ. #ಸಿಎಂಅಂಕಲ್ ಮಕ್ಕಳು ಏನನ್ನ ಓದಬೇಕು, ಪರೀಕ್ಷೆಗೆ ಹೇಗೆ ಸಜ್ಜಾಗಬೇಕು? ನೀವು ಪುಸ್ತಕ ಕೊಡುವುದೆಂದು?'' 

''ಶಾಲೆ ಶುರುವಾಗಿ ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಮವಸ್ತ್ರ ಪೂರೈಕೆಯಾಗಿಲ್ಲ. ಮಕ್ಕಳು ಎರಡು ವರ್ಷ ಹಳೆಯದಾದ ಹರಿದುಹೋದ ಸಮವಸ್ತ್ರ ಹಾಕಿಕೊಂಡು ಬರ್ತಿದ್ದಾರೆ, ಮಕ್ಕಳಿಗೆ ಸಮವಸ್ತ್ರ ನೀಡುವಲ್ಲೂ ವಿಳಂಬವೇಕೆ, ಸಮವಸ್ತ್ರ ನೀಡುವುದು ಯಾವಾಗ?'' ಎಂದು ಕಾಂಗ್ರೆಸ್ ಮುಖ್ಯಮಂತ್ರಿ ಅವರನ್ನು ಪ್ರಶ್ನೆ ಮಾಡಿದೆ. 

Similar News