ಬೆಂಗಳೂರು | ನ.18 ರಂದು ಹೊಟೇಲ್ ಮಾಲಕರ ಸಂಘದ ಸಭೆ; ಊಟ, ತಿಂಡಿ ದರ ಹೆಚ್ಚಳ ಸಾಧ್ಯತೆ
ಬೆಂಗಳೂರು, ನ. 14: ಹೊಟೇಲ್‍ಗಳಲ್ಲಿ ಟೀ, ಕಾಫಿ, ಊಟ, ತಿಂಡಿಯ ದರವನ್ನು ಏರಿಕೆ ಮಾಡಲು ಹೋಟೆಲ್ ಮಾಲಕರ ಸಂಘವು ಚಿಂತನೆ ನಡೆಸಿದ್ದು, ಈ ಕುರಿತು ಚರ್ಚಿಸಲು ನ.18 ರಂದು ಸಂಘದ ಸದಸ್ಯರ ಸಭೆ ಆಯೋಜಿಸಲಾಗಿದೆ.
ಎಪ್ರಿಲ್‍ನಲ್ಲಿ ನಡೆದ ಸಭೆಯಲ್ಲಿ ಹೊಟೇಲ್‍ಗಳ ಊಟ, ತಿಂಡಿ ದರಗಳನ್ನು ಶೇ.10ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ಕೆಲವು ಹೊಟೇಲ್ ಮಾಲಕರು ಹೊಸ ದರ ಜಾರಿಗೊಳಿಸಿದರು. ಕೆಲವು ಹೊಟೇಲ್‍ಗಳು ದರ ಏರಿಕೆ ಮಾಡಿರಲಿಲ್ಲ. ಅಡುಗೆ ಎಣ್ಣೆ, ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ದರಗಳು ಹೆಚ್ಚಾಗಿದ್ದು, ಈಗ ಎಲ್ಲ ಹೊಟೆಲ್‍ಗಳಿಗೆ ಅನ್ವಯವಾಗುವಂತೆ ದರ ಏರಿಕೆ ಮಾಡಲು ಸಭೆಯಲ್ಲಿ ವಿವರವಾದ ಚರ್ಚೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ಸಂಘವು ತಿಳಿಸಿದೆ.
ಇತ್ತಿಚೆಗೆ ಕೇಂದ್ರ ಸರಕಾರವು ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ಮೇಲಿನ ರಿಯಾಯಿತಿಯನ್ನು ಹಿಂಪಡೆದಿದೆ. ಇದರಿಂದ ಹೋಟೆಲ್‍ಉದ್ಯಮಕ್ಕೆ ಹೊರೆಯಾಗಲಿದೆ. ಸಿಲಿಂಡರ್ ಮೇಲಿನ ರಿಯಾಯಿತಿಯ ಬಗ್ಗೆ ಮರು ಪರಿಶೀಲನೆ ಮಾಡಲು ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಸಂಘವು ತಿಳಿಸಿದೆ.