ನ.28ರಂದು ಶರಾವತಿ ಮುಳುಗಡೆ ಸಂತ್ರಸ್ತರ ಬೃಹತ್ ಸಮಾವೇಶ: ಮಧು ಬಂಗಾರಪ್ಪ

Update: 2022-11-15 17:08 GMT

ಶಿವಮೊಗ್ಗ, ನ.15: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತ ಸಮಿತಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. 

ಈ ಕುರಿತು ನಗರದ ಈಡಿಗರ ಭವನದಲ್ಲಿ  ಸುದ್ದಿಗೋಷ್ಟಿ ನಡೆಸಿದ ಮಾಜಿ ಶಾಸಕ ಮಧುಬಂಗಾರಪ್ಪ, ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ದೊಡ್ಡ ಮಟ್ಟದ ಹೋರಾಟ ನಡೆಸಲಾಗುತ್ತಿದೆ.ಇದೇ ನ.28ರಂದು ಶಿವಮೊಗ್ಗದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು, ನ.28ರಂದು ಆಯನೂರಿನಿಂದ ಪಾದಯಾತ್ರೆ ನಡೆಸಲಾಗುತ್ತದೆ. ಜಿಲ್ಲೆಯ ವಿವಿಧೆಡೆಯ ಶರಾವತಿ ಸಂತ್ರಸ್ತರು, ಮಕ್ಕಳು, ಮಹಿಳೆಯರು ದೊಡ್ಡ ಸಂಖ್ಯೆಯ ಜನರು ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅನ್ಯಾಯ ಆದರೂ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ. ಶರಾವತಿ-ಚಕ್ರಾ ಸಾವೆಹಕ್ಲು ಮುಳುಗಡೆ ರೈತರಿಗೆ ಮೀಸಲಿಟ್ಟ ಜಾಗವನ್ನು ಕೆಲವು ಬಿಜೆಪಿ ನಾಯಕರು ಭೂಕಬಳಿಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಶರಾವತಿ ಮುಳುಗಡೆ ಸಂತ್ರಸ್ತರ ಡಿನೋಟಿಫಿಕೇಷನ್ ರದ್ದುಗೊಳಿಸಿರುವ ಬಗ್ಗೆ  ಚಳಿಗಾಲದ ಅಧಿವೇಶನಲ್ಲಿ ನಮ್ಮ ರಾಜ್ಯ ನಾಯಕರು ಮಾತನಾಡಲಿದ್ದಾರೆ.ಅಲ್ಲದೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕಿನ ಸಮಸ್ಯೆ ವಿಚಾರನ್ನು ಸೇರಿಸಲಾಗುತ್ತಿದೆ. ಅಲ್ಲದೇ ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಶರಾವತಿ ಮುಳುಗಡೆ ಸಂತ್ರಸ್ತರ ಡಿನೋಟಿಫಿಕೇಷನ್ ರದ್ದತಿ ಮಾಡಿರುವ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಜಾಗೃತ ಸಮಿತಿ ಅಸ್ಥಿತ್ವಕ್ಕೆ

ಶರಾವತಿ ಸಂತ್ರಸ್ತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದು ಈ ಸಮಿತಿಯ ಪ್ರಮುಖ ಉದ್ದೇಶ. ದೀಪದ ಕೆಳಗೆ ಸದಾ ಕತ್ತಲು ಇರಲಿದೆ. ಹಾಗೆಯೆ ರಾಜ್ಯಕ್ಕೆ ಬೆಳಕು ನೀಡಿದ ಮುಳುಗಡೆ ಸಂತ್ರಸ್ತರು ಕತ್ತಲಲ್ಲಿ ಇದ್ದಾರೆ. ಇದೇ ಕಾರಣಕ್ಕೆ ಹೋರಾಟ ನಡೆಸಲಾಗುತ್ತಿದೆ ಎಂದರು.

ಸಮಾವೇಶದಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಬೇಳೂರ ಗೋಪಾಲಕೃಷ್ಣ,ಕೆ.ಬಿ ಪ್ರಸನ್ನ ಕುಮಾರ್,ಕಲಗೋಡು ರತ್ನಾಕರ್,ರಮೇಶ್ ಹೆಗಡೆ,ವಕೀಲರಾದ ಎನ್.ಪಿ ಧರ್ಮರಾಜ್,ಅನಿತಾಕುಮಾರಿ,ಜಿ.ಡಿ ಮಂಜುನಾಥ್ ಮತ್ತಿತರರು ಇದ್ದರು.

'ಸಂತ್ರಸ್ತರ ಬದುಕು ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ಸಂತ್ರಸ್ತರ ಪರವಾಗಿ ಇತ್ತು. ಸುಮಾರು 58 ಡಿನೋಟಿಫಿಕೇಷನ್ ಮಾಡುವ ಮೂಲಕ ಸಂತ್ರಸ್ತರ ಬದುಕಲ್ಲಿ ಬೆಳಕು ಮೂಡಿಸಿತ್ತು. ಆದರೆ ಬಿಜೆಪಿ ಸರ್ಕಾರ ಹೈಕೋರ್ಟ್‌ನಲ್ಲಿ ಎರಡು ನೋಟಿಫಿಕೇಷನ್ನಿಗೆ ಸಂಬಂಧಿಸಿದಂತೆ ರದ್ದಾಗಿರುವುದನ್ನೇ ಇಟ್ಟಕೊಂಡು ಉಳಿದೆಲ್ಲಾ ಡಿನೋಟಿಫಿಕೇಷನ್ ರದ್ದುಮಾಡಿ ನೋಟಿಫಿಕೇಷನ್ ಮಾಡಿ ಸಂತ್ರಸ್ತರನ್ನು ಅತಂತ್ರರನ್ನಾಗಿ ಮಾಡಿದೆ'

ಆರ್.ಪ್ರಸನ್ನ ಕುಮಾರ್, ಸಮಿತಿ ಸಂಚಾಲಕ
**
'ನಮ್ಮ ಹೋರಾಟ ಐತಿಹಾಸಿಕ ರೂಪ ಪಡೆಯುವುದರಲ್ಲಿ ಆಶ್ಚರ್ಯವೇ ಇಲ್ಲ. ನೇಣು ಇಲ್ಲವೇ ಹೋರಾಟ ಎಂಬ ನಿರ್ಧಾರಕ್ಕೆ ಸಂತ್ರಸ್ತರು ಬಂದಿದ್ದಾರೆ. ಈಗಾಗಲೇ ದಯಾಮರಣಕ್ಕೆ ಸಂತ್ರಸ್ತರು ಅರ್ಜಿ ಹಾಕಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆಗಡುಕ ಬಿಜೆಪಿ ಸರ್ಕಾರದ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟವನ್ನು ನಾವು ಆರಂಭಿಸಿದ್ದೇವೆ. ನ.28ರಂದು ಈ ಬೃಹತ್ ಹೋರಾಟಕ್ಕೆ ಕರೆಕೊಟ್ಟಿದ್ದೇವೆ. ಎತ್ತು, ಗಾಡಿ., ಮಕ್ಕಳು, ಮರಿ ಹೀಗೆ ಕುಟುಂಬ ಸಮೇತ ನ.28ರಂದು ಮಲೆನಾಡಿನ ಎಲ್ಲ ಹಳ್ಳಿಗಳ ರಸ್ತೆಗಳು ಶಿವಮೊಗ್ಗಕ್ಕೆ ಸೇರಿಕೊಳ್ಳುತ್ತವೆ'

-ಬೇಳೂರು ಗೋಪಾಲಕೃಷ್ಣ ,ಮಾಜಿ ಶಾಸಕರು

----------------

''ಶರಾವತಿ ಸಂತ್ರಸ್ತರಿಗೆ ಜಾಗ ಮಂಜೂರು ಮಾಡಲಾಗಿತ್ತು. ಈಗ ಅದನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಪ್ರಭಾವಿಗಳ ಜಾಗ ಬಿಟ್ಟು ಉಳಿದ ಜಾಗವನ್ನು ಡಿನೋಟಿಫೈ ಮಾಡಲಾಗಿದೆ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನೇ ನಾವು ಮುಂದಿಟ್ಟುಕೊಂಡು ಇದನ್ನು ಮುಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿಯೇ ಸಂತ್ರಸ್ತರ ಸಮಸ್ಯೆ ಪರಿಹರಿಸುವ ಘೋಷಣೆ ಮಾಡುತ್ತೇವೆ''

-ಕಿಮ್ಮನೆ ರತ್ನಾಕರ್, ಮಾಜಿ ಸಚಿವ

Similar News