ದೂರು ವಾಪಸ್‌ಗೆ ಮುರುಘಾ ಶರಣರಿಂದ ಹಣದ ಆಮಿಷ ಆರೋಪ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಒಡನಾಡಿ ಸಂಸ್ಥೆಯಿಂದ ದೂರು
ಮೈಸೂರು: ಚಿತ್ರದುರ್ಗದ ಮುರುಘಾ ಮಠದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಪಟ್ಟ ಬಾಲಕಿಯು ನೀಡಿದ ಗುರುತರ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಲು ಆದೇಶ ನೀಡುವಂತೆ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ ಅವರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.
'ಹಣದ ಆಮಿಷ ಒಡ್ಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.
► ದೂರಿನಲ್ಲೇನಿದೆ?
''ಸಂತ್ರಸ್ತ ಬಾಲಕಿಯು ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ತನ್ನ ಜೊತೆಗಾರ್ತಿ ಹಾಗೂ ಮುರುಘಾ ಶರಣರಿಂದ ದೌರ್ಜನ್ಯಕ್ಕೊಳಪಟ್ಟ ಬಾಲಕಿಗೆ ಒಂದು ದಿನ ಮುಸ್ಸಂಜೆಯ ಹೊತ್ತು ಆಕೆಯ ತಂದೆಯು ಬಾಲ ಭವನದ ದೂರವಾಣಿಗೆ ಕರೆ ಮಾಡಿದ್ದರು. ಕರೆ ಬಂದಾಗ ಅಲ್ಲಿನ ಸಿಬ್ಬಂದಿಯು, ಲೌಡ್‌ಸ್ಪೀಕರ್ ಆನ್ ಮಾಡಿ ಮಾತನಾಡಿಸಿದ್ದರು. ''ಸ್ವಾಮಿಗಳು ನಮ್ಮನ್ನು ನೋಡಿಕೊಂಡಿದ್ದಾರೆ, ಹಣವನ್ನೂ ಕೊಟ್ಟಿದ್ದಾರೆ. ನೀನು ಯಾವ ಕೇಸನ್ನೂ ಮುಂದುವರಿಸುವುದು ಬೇಡ. ದೂರು ವಾಪಸ್ ತೆಗೆದುಕೊಂಡು ಬಂದು ಬಿಡು'' ಎಂದು ಗೆಳತಿಯ ತಂದೆಯು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾಳೆ'' ಎಂದು ದೂರಿನಲ್ಲಿ ತಿಳಿಸಲಾಗಿದೆ.
''ಆ ಬಾಲಕಿಯು ತನ್ನ ಮೇಲೆ ಆಗಿದ್ದ ದೌರ್ಜನ್ಯವನ್ನು ಪ್ರಬಲವಾಗಿ ಪ್ರತಿಭಟಿಸುತ್ತಲೇ ಬಂದಿದ್ದಳು. ತನ್ನನ್ನು ಯಾವುದೇ ರೀತಿಯಲ್ಲಿ ನೋಡಿಕೊಳ್ಳದೇ ತೊಂದರೆಗೊಳಪಡಿಸುತ್ತಿದ್ದ ತಂದೆ ಹಾಗೂ ಚಿಕ್ಕಪ್ಪನ ವಿರುದ್ಧ ಬಹಿರಂಗವಾಗಿಯೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದುದಲ್ಲದೆ ಒಂದು ಹಂತದಲ್ಲಿ ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರನ್ನು ದಾಖಲಿಸಿರುತ್ತಾಳೆ. ನನ್ನನ್ನು ದಯಮಾಡಿ ಮೈಸೂರಿನ ಒಡನಾಡಿ ಸಂಸ್ಥೆಗಾದರೂ ಕಳುಹಿಸಿಕೊಡಿ. ಆದರೆ ನನ್ನ ತಂದೆ ಅಥವಾ ಚಿಕ್ಕಪ್ಪನೊಂದಿಗೆ ಕಳುಹಿಸಬೇಡಿ ಎಂದು ದೂರಿನಲ್ಲಿ ವಿನಂತಿಸಿಕೊಂಡಿದ್ದಳು, ಆದಾಗಿಯೂ, ಬಾಲ ನ್ಯಾಯ ಕಾಯ್ದೆಯ ವಿರುದ್ಧ, ಮಗುವಿನ ಇಚ್ಛೆ ಹಾಗೂ ಹಿತಾಸಕ್ತಿಯನ್ನು ತಿರಸ್ಕರಿಸಿ ಆರೋಪಿಯ ಪರ ನಿಂತಿದ್ದ ಚಿಕ್ಕಪ್ಪ ಹಾಗೂ ತಂದೆಯೊಡನೆ ಚಿತ್ರದುರ್ಗದ ಸಿಡಬ್ಲ್ಯೂಸಿ ಮಗುವನ್ನು ಕಳುಹಿಸಿ ಕೊಟ್ಟಿದ್ದು ಅನುಮಾನಾಸ್ಪದ ಹಾಗೂ ಇವರ ಈ ಹೆಜ್ಜೆಗೆ ಮತ್ತೊರ್ವ ಬಾಲಕಿ ನೀಡಿರುವ ಹೇಳಿಕೆಯು ಪೂರಕವಾಗಿ ನಿಂತಿದೆ. ಮಕ್ಕಳ ಮೇಲೆ ನಡೆದಿರುವ ಹೀನತೆ ಹೀನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಹಣದ ಆಮಿಷ ಒಡ್ಡಿ ಮುಚ್ಚಿ ಹಾಕಲು ಆರೋಪಿಗಳು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಈ ಬಗ್ಗೆಯೂ ವಿಚಾರಣೆ ನಡೆಸಬೇಕು'' ಎಂದು ದೂರಿನಲ್ಲಿ ತಿಳಿಸಲಾಗಿದೆ.