BMTC ಬಸ್ ಢಿಕ್ಕಿ; ಗಂಭೀರ ಗಾಯಗೊಂಡಿದ್ದ ಯೋಧ ಮೃತ್ಯು
ಕೋಲಾರ, ನ.17: ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.
22 ವರ್ಷದ ಚೇತನ್ ಮೃತ ಯೋಧರಾಗಿದ್ದು, ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಬಳಿ ನವೆಂಬರ್ 07ರಂದು ಬೈಕ್ ಗೆ ಬಿಎಂಟಿಸಿ ಬಸ್ ಢಿಕ್ಕಿಯಾಗಿ ಚೇತನ್ ಅವರು ಗಾಯಗೊಂಡಿದ್ದರು ಎಂದು ತಿಳಿದು ಬಂದಿದೆ.
ಸೇನೆಗೆ ಸೇರಿ ಮೂರು ವರ್ಷ ಪೂರೈಸಿದ್ದ ಚೇತನ್, ಇತ್ತೀಚೆಗೆ ರಜೆ ಮೇಲೆ ಕುಟುಂಬಸ್ಥರ ಜೊತೆಗೆ ಸಮಯ ಕಳೆಯಲು ಬೆಂಗಳೂರಿಗೆ ಬಂದಿದ್ದರೆನ್ನಲಾಗಿದೆ.
ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ಯೋಧ ಚೇತನ್, ಇಂದು ಯಲಹಂಕ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತ ಚೇತನ್ ಅವರ ತಂದೆ ಸುರೇಶ್ ಅವರು ಕೂಡ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದು, 34 ವರ್ಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಪಡೆದಿದ್ದರು ಎಂದು ಹೇಳಲಾಗಿದೆ.
ಚೇತನ್ ಅವರು ಚೆನ್ನೈ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಇಂದು ಸ್ವಗ್ರಾಮ ಚಿನ್ನಕೋಟೆಯಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.