ಶಿಯೊಮಿ ಖಾತೆ ಜಪ್ತಿ ಮಾಡಿದ್ದ ಪ್ರಾಧಿಕಾರದ ನಿರ್ಧಾರ ಪ್ರಶ್ನಿಸಿ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2022-11-17 17:18 GMT

ಬೆಂಗಳೂರು, ನ.17: ಚೀನಾದ ಶಿಯೊಮಿ ಕಾರ್ಪೊರೇಷನ್‍ನ ಸ್ಥಳೀಯ ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 5,551 ಕೋಟಿ ರೂ.ಜಪ್ತಿ ಮಾಡಿದ್ದ ಜಾರಿ ನಿರ್ದೇಶನಾಲಯದ(ಈ.ಡಿ.) ಆದೇಶವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ(ಫೆಮಾ) ಅಡಿ ರಚಿಸಿರುವ ಸಕ್ಷಮ ಪ್ರಾಧಿಕಾರವು ಕಾಯಂಗೊಳಿಸಿದ್ದನ್ನು ಪ್ರಶ್ನಿಸಿ ಕಂಪೆನಿಯು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ. 

ಆಕ್ಷೇಪಾರ್ಹವಾದ ಕಾಯಂ ಆದೇಶ ಪ್ರಶ್ನಿಸಿ ಶಿಯೊಮಿ ಇಂಡಿಯಾ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆದೇಶವನ್ನು ಕಾಯ್ದಿರಿಸಿದೆ. 

ಸೆ.19ರಂದು ಸಕ್ಷಮ ಪ್ರಾಧಿಕಾರವು ಜಾರಿ ನಿರ್ದೇಶನಾಲಯದ(ಈ.ಡಿ.) ಜಪ್ತಿ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಶಿಯೊಮಿಯು ಹೈಕೋರ್ಟ್ ಮೆಟ್ಟಿಲೇರಿತ್ತು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿದೆ. ಈ.ಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ್, ವಕೀಲ ಮಧುಕರ್ ದೇಶಪಾಂಡೆ, ಶಿಯೊಮಿ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡನೆ ಮಾಡಿದರು.  

ರಾಯಧನದ ನೆಪದಲ್ಲಿ ಅಕ್ರಮ ವರ್ಗಾವಣೆ: ಶಿಯೊಮಿ ಇಂಡಿಯಾ ಕಂಪೆನಿಯು, ಭಾರತದಲ್ಲಿ ಗಳಿಸಿದ ಹಣವನ್ನು ರಾಯಧನ ನೀಡುವ ನೆಪದಲ್ಲಿ ವಿದೇಶಿ ಕಂಪೆನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದೆ. ಹೀಗಾಗಿ, ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999ರ ನಿಯಮಗಳ ಉಲ್ಲಂಘನೆ ಎಂಬುದು ಈ.ಡಿ ಆರೋಪ.

ಈ ಆರೋಪಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಈ.ಡಿ ಕಚೇರಿಯ ಸಹಾಯಕ ನಿರ್ದೇಶಕ ಎನ್.ಸೋಮಶೇಖರ್, ‘ಶಿಯೊಮಿ ಕಂಪೆನಿಯ, ಬೆಂಗಳೂರು ನಗರದಲ್ಲಿನ ಸಿಟಿ ಬ್ಯಾಂಕ್, ಐಡಿಬಿಐ ಬ್ಯಾಂಕ್, ಡ್ಯೂಷ್ ಬ್ಯಾಂಕ್, ಎಚ್‍ಎಸ್‍ಬಿಸಿ ಬ್ಯಾಂಕ್‍ಗಳ ಚಾಲ್ತಿ ಖಾತೆ ಮತ್ತು ನಿಶ್ಚಿತ ಠೇವಣಿಗಳಲ್ಲಿ ಹೊಂದಿರುವ 5,551.27 ಬೃಹತ್ ಮೊತ್ತವನ್ನು ಜಪ್ತಿ ಮಾಡಬೇಕು ಎಂದು 2022ರ ಎಪ್ರಿಲ್ 29ರಂದು ಆದೇಶಿಸಿದ್ದರು. 

ಈ.ಡಿ ಈ ರೀತಿಯ ಆದೇಶ ಹೊರಡಿಸಬಹುದು ಎಂಬ ಗುಮಾನಿಯಿಂದಲೇ ಎಪ್ರಿಲ್ 29ಕ್ಕೂ ಕೆಲವೇ ದಿನಗಳ ಮುನ್ನ ಸುಮಾರು ಒಂದೂವರೆ ಸಾವಿರ ಕೋಟಿಯಷ್ಟು ಮೊತ್ತದ ಹಣವನ್ನು ಶಿಯೊಮಿ ಚೀನಾದಲ್ಲಿರುವ ಸಂಸ್ಥೆಗೆ ವರ್ಗಾವಣೆ ಮಾಡಿದೆ ಎಂಬುದು ಈ.ಡಿ ಆಪಾದನೆ. ಶಿಯೊಮಿ ಮೊಬೈಲ್, ಸ್ಮಾರ್ಟ್ ಫೋನ್‍ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪೆನಿ. ಇದು ಭಾರತದಲ್ಲಿ 2014ರಿಂದ ಕಾರ್ಯ ನಿರ್ವಹಿಸುತ್ತಿದೆ.
 

Similar News