ಸಿದ್ದರಾಮಯ್ಯ, ಡಿಕೆಶಿ ಚುನಾವಣೆಗೆ ಸ್ಪರ್ಧಿಸುವುದು ಬೇಡ: ಮಾಜಿ ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ, ನ. 18: ‘ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸದೆ, ಪಕ್ಷದ ಗೆಲುವಿಗೆ ರಾಜ್ಯವನ್ನು ಸುತ್ತಾಡಿ ಪ್ರಚಾರ ನಡೆಸಬೇಕು’ ಎಂದು ಮಾಜಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯರಿಗೆ ವಯಸ್ಸಾಗಿದ್ದು ಹಾಗೂ ಇನ್ನಿತರ ಕಾರಣಗಳಿಂದ ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಬೇಡ. ಅವರು ಪಕ್ಷ ಬಲಪಡಿಸುವ ಕೆಲಸ ಮಾಡಲಿ. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ, ಅಲ್ಲಿಗೆ ಸೀಮಿತ ಆಗುವುದು ಒಳ್ಳೆಯದಲ್ಲ’ ಎಂದು ಹೇಳಿದರು.
‘ಸಿದ್ಧರಾಮಯ್ಯ ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆದ್ದು ಬರಲಿದ್ದಾರೆ. ಆದರೆ, ಚುನಾವಣೆ ಸ್ಪರ್ಧಿಸಿದರೆ ಆ ಕ್ಷೇತ್ರದ ಮೇಲೆ ಗಮನ ಹರಿಸಬೇಕಾಗುತ್ತದೆ. ರಾಜ್ಯ ವಿವಿಧ ಕ್ಷೇತ್ರದಲ್ಲಿ ಸುತ್ತಬೇಕಾಗಿರುವುದರಿಂದ ಅವರು ಸ್ಪರ್ಧಿಸದೆ ಇರುವುದು ಒಳ್ಳೆಯದು. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಒಂದು ಕ್ಷೇತ್ರದಿಂದ ಸ್ಪರ್ಧಿಸದೆ ರಾಜ್ಯ ಸುತ್ತಾಡಿ ಪ್ರಚಾರ ಮಾಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದರು.
‘ಉಭಯ ನಾಯಕರು ವಿಧಾನಸಭಾ ಚುನಾವಣೆ ಸ್ಪರ್ಧಿಸದಿದ್ದರೆ ಪಕ್ಷ ಸುಲಭವಾಗಿ ಅಧಿಕಾರ ಹಿಡಿಯಲು ಸಾಧ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸ್ಪರ್ಧಿಸದೆ ಅಧಿಕಾರ ಪಡೆಯಬಹುದು’ ಎಂದ ಅವರು, ಕಲಘಟಗಿ ಕ್ಷೇತ್ರದಲ್ಲಿ ಸಿಗದಿದ್ದರೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಪಕ್ಷದಲ್ಲೇ ಇರುತ್ತೇನೆ’ ಎಂದು ಸ್ಪಷ್ಟನೆ ನೀಡಿದರು.