ಶಾಲೆಗಳಿಗೆ ಕೇಸರಿ ಬಣ್ಣ ವಿವಾದ: ಜ್ಞಾನದ ದೇಗುಲಗಳನ್ನೂ ಬಿಡದ ಹೊಲಸು ರಾಜಕೀಯ ಎಂದ ನಟ ಕಿಶೋರ್
ಬೆಂಗಳೂರು: ಸರ್ಕಾರಿ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರಕ್ಕೆ ನಟ ಕಿಶೋರ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದು, ''ಏಳಿ ಎದ್ದೇಳಿ ಪ್ರತಿಭಟಿಸಿ'' ಎಂದು ಕರೆ ನೀಡಿದ್ದಾರೆ.
ಈ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷ ಕಾಂಗ್ರೆಸ್, #ಸಿಎಂಅಂಕಲ್ ಹ್ಯಾಷ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ನಡೆಸಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿ ಇದೀಗ ಫೇಸ್ ಬುಕ್ ಪೋಸ್ಟ್ ಮಾಡಿರುವ ನಟ ಕಿಶೋರ್ ಕುಮಾರ್ ಅವರು, ''ಜ್ಞಾನದ ದೇಗುಲ, ಶಾಲೆಗಳನ್ನೂ ಬಿಡದ ಹೊಲಸು ರಾಜಕೀಯ. ಧರ್ಮದ ಹೆಸರಿನಲ್ಲಿ ವಿವೇಕಾನಂದರ ಉದಾತ್ತ ಚಿಂತನೆಗಳ ಅವಹೇಳನ, ಅವಿವೇಕತನ. ಕೇವಲ ಯಾರದ್ದೋ ಓಟು, ಅಧಿಕಾರದ ದಾಹಕ್ಕಾಗಿ ನಮ್ಮ ಮಕ್ಕಳೂ, ಅವರ ಭವಿಷ್ಯವೂ, ದೇಶವೂ ಬಲಿಯಾಗಬೇಕಾದೀತು. ಏಳಿ ಎದ್ದೇಳಿ ಪ್ರತಿಭಟಿಸಿ'' ಎಂದು ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ 8000 ಶಾಲಾ ಕೊಠಡಿಗಳೀಗೆ ವಿವೇಕ ಎಂದು ಹೆಸರಿಡಲಾಗಿದ್ದು, ಆ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಹೇಳಿಕೆ ನೀಡಿದ್ದರು.
ಇದನ್ನೂ ಓದಿ... ಶಾಲೆಗಳಿಗೆ ಕೇಸರಿ ಬಣ್ಣ ವಿವಾದ: 'ಸಿಎಂ ಅಂಕಲ್' ಅಭಿಯಾನ ಆರಂಭಿಸಿದ ಕಾಂಗ್ರೆಸ್, ಬೊಮ್ಮಾಯಿಗೆ ಪ್ರಶ್ನೆಗಳ ಸುರಿಮಳೆ