ಮಡಿಕೇರಿ: ಕಾಡಾನೆಯ ರಕ್ಷಣೆಗೆ ಬಂದ 'ಸನ್ ಪ್ಯೂರ್ ಆಯಿಲ್' ಮತ್ತು 'ಸರ್ಫ್' !
ಮಡಿಕೇರಿ (Madikeri): ಬೃಹತ್‍ದೇಹಿ ಕಾಡಾನೆಯೊಂದು (Elephant) ಸಿಮೆಂಟ್ ಕಂಬಗಳ ಬೇಲಿಯ ನಡುವೆ ಸಿಲುಕಿ ಪಡಿಪಾಟಲು ಪಟ್ಟ ಘಟನೆ ತೊಂಡೂರು ಗ್ರಾಮದಲ್ಲಿ ನಡೆದಿದೆ. ಕಾಡಾನೆಯ ರಕ್ಷಣೆಗೆ ಸನ್ ಪ್ಯೂರ್ ಆಯಿಲ್ ಮತ್ತು ಸರ್ಫ್ ಬಳಸುವ ಅನಿವಾರ್ಯತೆ ಅರಣ್ಯ ಇಲಾಖೆಗೆ ಎದುರಾಯಿತು.
ಕುಶಾಲನಗರ-ಸುಂಟಿಕೊಪ್ಪ ಮುಖ್ಯ ರಸ್ತೆಯಲ್ಲಿ ಕಾಣುವ ಆನೆಕಾಡು ರಕ್ಷಿತಾರಣ್ಯ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ, ಕಾಡಾನೆಗಳ ನಿಯಂತ್ರಣಕ್ಕೆ ಸಿಮೆಂಟ್ ಕಂಬಗಳ ಬೇಲಿ ಅಳವಡಿಸಲಾಗಿದೆ. ಶುಕ್ರವಾರ ಸಂಜೆ ಈ ವ್ಯಾಪ್ತಿಗೆ ದಾಳಿ ಇಟ್ಟ ಕಾಡಾನೆಗಳು ಸಿಮೆಂಟ್ ಬೇಲಿ ದಾಟುವ ಪ್ರಯತ್ನ ನಡೆಸಿ ವಿಫಲವಾದರೆ, ಹೆಣ್ಣಾನೆಯೊಂದು ತನ್ನ ಈ ಪ್ರಯತ್ನದ ಸಂದರ್ಭ ಎರಡು ಸಿಮೆಂಟ್ ಕಂಬಗಳ ನಡುವೆ ಸಿಲುಕಿತ್ತು.
ಮಾಹಿತಿ ಅರಿತ ಅರಣ್ಯ ಇಲಾಖಾ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ, ಜೆಸಿಬಿ ಮೂಲಕ ಆನೆಯ ರಕ್ಷಣೆ ಮಾಡುವ ಪ್ರಯತ್ನಕ್ಕೆ ಮುಂದಾದ ಸಂದರ್ಭ, ಇತರೆ ಆನೆಗಳು ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾದದ್ದು ಕಾರ್ಯಾಚರಣೆಗೆ ತೊಡಕನ್ನುಂಟುಮಾಡಿತು.
ಬೇರೆ ಉಪಾಯ ಕಾಣದ ಅರಣ್ಯ ಇಲಾಖಾ ಸಿಬ್ಬಂದಿಗಳು ನಾಲ್ಕು ಟಿನ್ ಸನ್ ಪ್ಯೂರ್ ಎಣ್ಣೆ ಮತ್ತು ಸರ್ಫ್ ಬೆರೆಸಿದ ನೀರನ್ನು ಸಿಮೆಂಟ್ ಕಂಬದ ನಡುವೆ ಸಿಲುಕಿದ್ದ ಆನೆಯ ಮೇಲೆ ಸುರಿದಿದ್ದಾರೆ. ಜಾರಿಕೆಯ ಎಣ್ಣೆ ಮತ್ತು ಸರ್ಫ್‍ನಿಂದ ಕಂಬಗಳೆಡೆ ಸಿಲುಕಿದ್ದ ಆನೆ ಹೊರಬಂದಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಮ, ಆರ್‍ಎಫ್‍ಓಗಳಾದ ರಂಜನ್, ಅನಿಲ್ ಡಿಸೋಜ, ಸುಬ್ರಾಯ, ದೇವಯ್ಯ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇದನ್ನು ಓದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿಗಳು ಅಸ್ವಸ್ಥ