ಚಕ್ರವರ್ತಿ ಸೂಲಿಬೆಲೆ ‘ಸುಳ್ಳಿನ ವಿವಿಯ ಕುಲಪತಿ’: ಸತೀಶ್ ಜಾರಕಿಹೊಳಿ
ಬೆಳಗಾವಿ: "ಯುವ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ (Chakravarty Sulibele) ನಮ್ಮ ರಾಜ್ಯದಲ್ಲಿನ ಸುಳ್ಳಿನ ವಿಶ್ವ ವಿದ್ಯಾಲಯದ ಕುಲಪತಿ. ಶೇ.50ರಷ್ಟು ಸುಳ್ಳು ಹೇಳುವವರ ಜೊತೆ ಚರ್ಚೆ ಮಾಡಬಹುದು. ಆದರೆ, ಈತ ಹೇಳುವುದೆಲ್ಲ ಸುಳ್ಳು. ಆದುದರಿಂದ, ಇಂತಹವರ ಜೊತೆ ಚರ್ಚೆ ಮಾಡಿ ಕಾಲಹರಣ ಮಾಡುವ ಆಗತ್ಯವಿಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ತಿರುಗೇಟು ನೀಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೂ’ ಪದ ಎಲ್ಲಿಂದ ಹೇಗೆ ಬಂತು ಎಂಬುದರ ಬಗ್ಗೆ ಚರ್ಚೆ ಆಗಲಿ. ಈ ವಿಷಯವನ್ನು ತಿಳಿದುಕೊಳ್ಳಲು ನಾನು ಕಾತುರನಾಗಿದ್ದೇನೆ. ಆದರೆ, ಸುಳ್ಳು ಹೇಳುವುದರಲ್ಲಿ ನಿಸ್ಸೀಮನಾಗಿರುವ, ಸುಳ್ಳಿನ ಸರದಾರ ಸೂಲಿಬೆಲೆ ಜೊತೆ ಚರ್ಚೆ ಮಾಡುವುದು ಬೇಡ ಎಂಬುದು ನಮ್ಮ ಕಾರ್ಯಕರ್ತರು ಹಾಗೂ ನನ್ನ ಅಭಿಪ್ರಾಯ ಎಂದರು.
ಸೂಲಿಬೆಲೆ ಹೊರತುಪಡಿಸಿ ಬೇರೆಯಾರಾದರೂ ಒಳ್ಳೆಯವರು ಬರಲಿ. ಅವರೊಂದಿಗೆ ಚರ್ಚೆ ಮಾಡಲು ಸಿದ್ಧ. ಸೂಲಿಬೆಲೆ 10 ವರ್ಷಗಳ ಹಿಂದೆ ನೀಡಿರುವ ಹೇಳಿಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಚಿನ್ನದ ರಸ್ತೆಗಳು ಎಲ್ಲಿವೆ ಎಂಬುದನ್ನು ಹುಡುಕಬೇಕಿದೆ, ಮಂಗಳೂರಿನಿಂದ ಬೆಳಗ್ಗೆ ಬೆಂಗಳೂರಿಗೆ ಕೆಲಸಕ್ಕೆ ಹೋಗಿ, ರಾತ್ರಿ ಊಟಕ್ಕೆ ಪುನಃ ಮಂಗಳೂರಿಗೆ ಬರುವುದು ಹೇಗೆ ಅನ್ನೋದು ತಿಳಿದುಕೊಳ್ಳಬೇಕಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಯಾರಿಗೆ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನು ಲ್ಯಾಪ್‍ಟಾಪ್ ನಲ್ಲಿ ಒಂದು ಕ್ಲಿಕ್ ಮಾಡಿದರೆ ಸಾಕು ಎಲ್ಲವನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ನಾವು ನೋಡಬೇಕಿದೆ. ಸೂಲಿಬೆಲೆ ನೀಡಿರುವ ಈ ಮೇಲಿನ ಹೇಳಿಕೆಗಳಲ್ಲಿ ಯಾವುದಾದರೂ ಒಂದು ಸತ್ಯವಿದ್ದರೂ ನಾನು ಅವರೊಂದಿಗೆ ಚರ್ಚೆ ನಡೆಸಲು ಸಿದ್ಧ ಎಂದು ಅವರು ಸವಾಲು ಹಾಕಿದರು.
ಯಮಕನಮರಡಿ ಕ್ಷೇತ್ರದಲ್ಲಿ ಸಮಾವೇಶ ಮಾಡಿ ತಮ್ಮ ವಿರುದ್ಧ ಮಾತನಾಡಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ತಿರುಗೇಟು ನೀಡಲು ವಿಜಯಪುರದಲ್ಲಿ ಸಮಾವೇಶ ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಜಯಪುರದಲ್ಲಿ ಸಮಾವೇಶ ಮಾಡುವ ಸನ್ನಿವೇಶ ನಮಗಿಲ್ಲ. ನಮಗೆ ನಮ್ಮದೆ ಆದ ವೇದಿಕೆಗಳಿವೆ. ಗೋಕಾಕ್ ಅಥವಾ ವಿಜಯಪುರ ಯಾವುದೆ ಕ್ಷೇತ್ರವಿರಲಿ, ವಿರೋಧಿಗಳಿಗೆ ನಾವು ನೀಡುವ ಉತ್ತರ ಅವರಿಗೆ ತಟ್ಟುತ್ತದೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದಲೆ ಸ್ಪರ್ಧಿಸುತ್ತೇನೆ. ಈಗಾಗಲೆ, ಟಿಕೆಟ್‍ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಲಾಗಿದೆ. ಪಕ್ಷ ಸಂಘಟನೆಗಾಗಿ ಸದಾ ಸಿದ್ಧನಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಬೆಂಕಿ ಅನಾಹು