ಮೂಡಿಗೆರೆ | ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಹಲ್ಲೆ ಪ್ರಕರಣ: 10 ಮಂದಿಯ ಬಂಧನ

ಕಾಡಾನೆ ದಾಳಿಗೆ ಮಹಿಳೆ ಬಲಿ ಪ್ರಕರಣ

Update: 2022-11-21 04:43 GMT

ಚಿಕ್ಕಮಗಳೂರು, ನ.21: ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಶಾಸಕ ಎಂ.ಪಿ.ಕುಮಾರಸ್ವಾಮಿಯವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂದೂರು ಗ್ರಾಮದ ಹತ್ತು ಮಂದಿ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿರುವುದು (Arrest) ವರದಿಯಾಗಿದೆ.

ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿದ ಪೊಲೀಸರು 10 ಮಂದಿ ಗ್ರಾಮಸ್ಥರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಡಿಗೆರೆ ತಾಲೂಕಿನ ಕುಂದೂರು ಸಮೀಪದ ಹುಲ್ಲಮನೆ ಗ್ರಾಮದಲ್ಲಿ ರವಿವಾರ ಬೆಳಗ್ಗೆ 7:30ರ ಸುಮಾರಿಗೆ ಕಾಡಾನೆ ದಾಳಿ ನಡೆಸಿದ್ದರಿಂದ ಶೋಭಾ(45) ಎಂಬವರು ಮೃತಪಟ್ಟಿದ್ದರು. ಬಳಿಕ ಗ್ರಾಮಸ್ಥರು ದಿನವಿಡೀ ಮಹಿಳೆಯ ಮೃತದೇಹವನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ಸಂಜೆ ಆರು ಗಂಟೆಯ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದ್ದರು. ಬೆಳಗ್ಗೆ ಘಟನೆ ನಡೆದಿದ್ದರೂ ಸ್ಥಳಕ್ಕೆ ಆಗಮಿಸುವಲ್ಲಿ ಶಾಸಕರು ವಿಳಂಬಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಶಾಸಕರಿಗೆ ಘೇರಾವ್ ಹಾಕಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದರು. ಶಾಸಕರು ಧರಿಸಿದ್ದ ಬಟ್ಟೆಗಳನ್ನು ಹಿಡಿದು ಜಗ್ಗಿ ಹರಿದಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಹಲ್ಲೆ ಆರೋಪಿಗಳನ್ನು ಗುರುತಿಸಿ ಬಂಧಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ರವಿವಾರ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಲಾಠಿಚಾರ್ಜ್ ಹಾಗೂ ಕೆಲವರ ಬಂಧನವನ್ನು ಖಂಡಿಸಿ, ಗ್ರಾಮಸ್ಥರು ಪ್ರತಿಭಟನೆ ಮುಂದಾಗಿದ್ದಾರೆ. ಶೋಭಾ ಅವರ ಅಂತ್ಯ ಸಂಸ್ಕಾರ ಇನ್ನೂ ನೆರವೇರಿಸಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ: ಮೃತದೇಹ ನೋಡಲು ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಗ್ರಾಮಸ್ಥರಿಂದ ಹಲ್ಲೆ; ಆರೋಪ

Similar News