ನಾಡದೇವತೆಯ ಭಾವಚಿತ್ರ ಅಧಿಕೃತಗೊಳಿಸಿ ಶೀಘ್ರವೇ ಆದೇಶ: ಸಚಿವ ವಿ.ಸುನಿಲ್ ಕುಮಾರ್

Update: 2022-11-21 12:16 GMT

ಬೆಂಗಳೂರು, ನ. 21: ‘ಕರ್ನಾಟಕ ರಾಜ್ಯದ ನಾಡದೇವತೆ’ಯ ಪರಿಪೂರ್ಣವಾದ ಏಕರೂಪದ ಭಾವಚಿತ್ರ ಅಧಿಕೃತಗೊಳಿಸಿ ಸರಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಉಪಯೋಗಿಸಲು ಸರಕಾರವೇ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಬಳಸುವ ವೇಳೆ ದುರ್ಗಾದೇವಿ, ಸರಸ್ವತಿ ಸೇರಿದಂತೆ ಹಲವು ಚಿತ್ರಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಸರಕಾರವೇ ನಾಡದೇವತೆಯ ಅಧಿಕೃತ ಚಿತ್ರವನ್ನು ಬಿಡುಗಡೆ ಮಾಡಲಿದೆ’ ಎಂದು ಹೇಳಿದರು.

‘ಈ ಸಂಬಂಧ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ನಾಡಗೀತೆಯಿಂದ ಹಿಡಿದು ಕರ್ನಾಟಕದ ವೈಶಿಷ್ಟ್ಯಗಳನ್ನು ಗಮನಿಸಿ ಕಲಾವಿದ ಕೆ.ಸೋಮಶೇಖರ್ ಅವರ ಮೂಲಕ ಭುವನೇಶ್ವರಿಯ ಚಿತ್ರವನ್ನು ಸಿದ್ದಪಡಿಸಿ ಸರಕಾರಕ್ಕೆ ಶಿಫಾರಸು ಮಾಡಿದ್ದು, ಸಂಸ್ಕೃತಿ ಇಲಾಖೆ ಅದನ್ನು ಒಪ್ಪಿದೆ. ಸಿಎಂ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದ ನಂತರ ಭುವನೇಶ್ವರಿಯ ಭಾವಚಿತ್ರವನ್ನು ಸರಕಾರ ಬಿಡುಗಡೆ ಮಾಡಲಿದೆ’ ಎಂದು ಅವರು ತಿಳಿಸಿದರು.

‘ನಾಡಿನ ಹಲವು ವಿಶೇಷಗಳನ್ನು ಭುವನೇಶ್ವರಿ ಚಿತ್ರ ಒಳಗೊಂಡಿದ್ದು ಆ ಚಿತ್ರವೇ ಇನ್ನು ಮುಂದೆ ರಾಜ್ಯದ ಎಲ್ಲ ಕಡೆ ಪ್ರದರ್ಶಿಸಬೇಕು. ಹೊಯ್ಸಳರು, ಕದಂಬರು, ಮೈಸೂರು ಅರಸರು ಸೇರಿದಂತೆ ರಾಜ್ಯವನ್ನು ಆಳಿದ ಹಲವು ಪ್ರಮುಖ ರಾಜಮನೆತನಗಳ ವೈಶಿಷ್ಟ್ಯಗಳು ಭುವನೇಶ್ವರಿಯ ಚಿತ್ರದಲ್ಲಿದ್ದು, ಇನ್ನು ಮುಂದೆ ಅದೇ ಅಧಿಕೃತ ನಾಡದೇವತೆ ಚಿತ್ರವಾಗಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಕನ್ನಡಿಗರಿಗೆ ಉದ್ಯೋಗ: ‘ಕನ್ನಡವೇ ಆಡಳಿತ ಭಾಷೆಯಾಗಬೇಕೆಂಬ ಸಂಬಂಧ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಡಾ.ಸರೋಜಿನಿ ಮಹಿಷಿ ವರದಿಯ ಅನುಸಾರ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಬರಲಿರುವ ಕೈಗಾರಿಕೆಗಳಲ್ಲಿ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡಬೇಕು. ಇಲ್ಲವಾದರೆ ಸರಕಾರಿ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ನಾಮಫಲಕ ಕಡ್ಡಾಯ: ಕನ್ನಡ ನಾಮಫಲಕಗಳು ಕಡಿಮೆಯಾಗುತ್ತಿದ್ದು, ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಲಾಗುವುದು’ ಎಂದ ಸುನಿಲ್ ಕುಮಾರ್, ನಶಿಸುತ್ತಿರುವ ಕಲೆಗಳ ಪುನರುಜ್ಜೀವನಕ್ಕೆ ಡಿಸೆಂಬರ್ 6 ರಿಂದ ಎರಡು ತಿಂಗಳ ಕಾಲ ಸಂಸ್ಕೃತಿ ಇಲಾಖೆಯಿಂದ ಶಿಬಿರಗಳನ್ನು ನಡೆಸಲಾಗುವುದು ಎಂದರು.

‘ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಈ ಕಲೆಗಳನ್ನು ಪುನರುಜ್ಜೀವಗೊಳಿಸುವ ಕೆಲಸ ಮಾಡಿದರೆ ಮತ್ತು ಅವುಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದರೆ ಕನ್ನಡ ನಾಡಿನ ಆಸ್ಮಿತೆಯನ್ನು ಉಳಿಸಿದಂತಾಗುತ್ತದೆ’ ಎಂದ ಸುನಿಲ್ ಕುಮಾರ್, 2023ರ ಜನವರಿ 6ರಿಂದ ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಭುವನೇಶ್ವರಿ ರಥ 20 ಜಿಲ್ಲೆಗಳಿಂದ ಹೊರಟು ಹಾವೇರಿ ತಲುಪಲಿದೆ’ ಎಂದು ತಿಳಿಸಿದರು. 

Similar News