ಮತದಾರರ ಮಾಹಿತಿ ಕಳವು ಆರೋಪ : ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Update: 2022-11-23 16:26 GMT

ಬೆಂಗಳೂರು, ನ. 23: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ‘ಮತದಾರರ ಮಾಹಿತಿ ಕಳವು ಆರೋಪ ಪ್ರಕರಣ’ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಈ ಪ್ರಕರಣ ಸಂಬಂಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದೆ.

ಬುಧವಾರ ಹೊಸದಿಲ್ಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಸಂಸದ ನಾಸೀರ್ ಹುಸೇನ್, ಪರಿಷತ್ ಸದಸ್ಯ ನಸೀರ್ ಅಹ್ಮದ್ ಹಾಗೂ ಬೋಸರಾಜ್ ಒಳಗೊಂಡ ಸಮಿತಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

‘ಮತದಾರರ ಗುರುತಿನ ಚೀಟಿ ಮಾಹಿತಿ ಕಳವು ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೂಗಿನಡಿಯಲ್ಲೇ ಈ ವಂಚನೆ ನಡೆದಿದೆ. ಚಿಲುಮೆ ಟ್ರಸ್ಟ್ ಬಿಜೆಪಿ ನಾಯಕರ ಸಹಯೋಗದಲ್ಲಿದೆ. ಖಾಸಗಿ ವ್ಯಕ್ತಿಗಳನ್ನ ಬಿಎಲ್‍ಒಗಳಾಗಿ ಈ ಸಂಸ್ಥೆ ನಿಯೋಜನೆ ಮಾಡಿದೆ’ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಅವರು ದೂರಿದರು.

ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಅವರು, ‘ಜಿಲ್ಲಾ ಚುನಾವಣಾಧಿಕಾರಿ ಸಹಿ ಮಾಡಿರುವು ನಕಲಿ ವೋಟರ್ ಐಡಿಗಳನ್ನ ಚಿಲುಮೆ ಸಂಸ್ಥೆ ಬಳಸಿದೆ. ಇದು ಅತೀ ದೊಡ್ಡ ಹಗರಣ, 27 ಲಕ್ಷಕ್ಕೂ ಅಧಿಕ ಮತದಾರರ ಹೆಸರನ್ನ ಡಿಲೀಟ್ ಮಾಡಲಾಗಿದೆ. 11 ಲಕ್ಷ ಹೆಸರನ್ನ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಕೆಲ ಕ್ಷೇತ್ರಗಳನ್ನು ಗುರಿಯನ್ನಾಗಿಟ್ಟುಕೊಂಡು ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರ ಹೆಸರುಗಳನ್ನು ಡೀಲಿಟ್ ಮಾಡಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕಾನೂನು ಹೋರಾಟ: ಕೇಂದ್ರ ಚುನಾವಣಾ ಅಯೋಗಕ್ಕೆ ದೂರು ನೀಡಿದ್ದು, ಇದೊಂದು ದೇಶದ ಅತಿದೊಡ್ಡ ಹಗರಣ. ಅಗತ್ಯ ದಾಖಲೆಗಳೊಂದಿಗೆ ದೂರು ಕೊಟ್ಟಿದ್ದೇವೆ. ಸರಕಾರಿ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನ ಖಾಸಗಿ ಸಂಸ್ಥೆ, ಬಿಜೆಪಿ ಕಾರ್ಯಕರ್ತರು ಸೇರಿ ಮಾಡಿದ್ದಾರೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಚುನಾವಣಾ ಆಯೋಗ ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟದ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಹೇಳಿದರು.

Similar News