ಜಾನುವಾರು ಸಾಕಾಣಿಕೆ ನಿಯಮಗಳ ಬಗ್ಗೆ ಅರಿವು ಮೂಡಿಸಿ: ಸಚಿವ ಪ್ರಭು ಚವ್ಹಾಣ್
‘ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ’
ಬೆಂಗಳೂರು, ನ. 23: 'ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಗ್ರಾಮ ಸಭೆಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೆ, ಜಾನುವಾರು ಸಾಕಾಣಿಕೆ ನಿಯಮಗಳ ಬಗ್ಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಅಧಿಕಾರಿಗಳು ಮಾಡಿಲ್ಲ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು.
ಹೆಬ್ಬಾಳದ ಪಶುಪಾಲನ ಭವನದ ಸಭಾಂಗಣದಲ್ಲಿ ಪಶುಸಂಗೋಪನೆ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ‘ಕೆಲವು ಕಡೆ ಇನ್ನೂ ಅಕ್ರಮವಾಗಿ ಕಸಾಯಿಖಾನೆಗಳು ನಡೆಯುತ್ತಿವೆ ಎಂಬ ಮಾಹಿತಿ ಇದೆ. ಅವುಗಳನ್ನು ಪತ್ತೆ ಹಚ್ಚಿ ಶಾಶ್ವತವಾಗಿ ಬಂದ್ ಮಾಡಿಸುವ ಕೆಲಸ ಮಾಡಬೇಕು' ಎಂದರು.
ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಗಳಂತೆ ಪ್ರತಿ ಗ್ರಾಮದಲ್ಲಿ ಮೇವಿಗಾಗಿ ಗೋಮಾಳಗಳನ್ನು ಮೀಸಲಿಡಲು ಜಿಲ್ಲಾಧಿಕಾರಿಗಳು ಮತ್ತು ಆಯಾ ತಾಲೂಕಿನ ತಹಶೀಲ್ದಾರ್ ಗಳು ಕ್ರಮ ವಹಿಸಬೇಕು’ ಎಂದ ಪ್ರಭು ಚವ್ಹಾಣ್, ಇದೇ ವರ್ಷದ ಅಂತ್ಯದೊಳಗೆ ಎಲ್ಲ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ನೀಡಬೇಕು ಎಂದು ಗಡುವು ನೀಡಿದರು.
‘ರಾಜ್ಯದಲ್ಲಿ ಚರ್ಮ ಗಂಟು ರೋಗದಿಂದಾಗಿ ಗಡಿ ಭಾಗದಲ್ಲಿ ವೈರಾಣು ಹರಡುವಿಕೆಯಿಂದ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ವ್ಯಾಪಕವಾಗಿ ಚರ್ಮಗಂಟು ರೋಗಕ್ಕೆ 51 ಲಕ್ಷ ಲಸಿಕೆ ನೀಡಲಾಗಿದೆ. ಸಿಬ್ಬಂದಿ ಇಲ್ಲದಿರುವುದರಿಂದ ಲಸಿಕೆ ನೀಡುವ ಪ್ರಕ್ರಿಯೆಗೆ ತಡವಾಗುತ್ತಿದೆ ಎಂದು ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್ ಹೇಳಿದರು.
ಇಲಾಖೆಯ ಕಾರ್ಯದರ್ಶಿ ಡಾ.ಸಲ್ಮಾ ಕೆ.ಫಹೀಮ್, ಆಯುಕ್ತೆ ಎಸ್.ಅಶ್ವಥಿ, ಪಶುವೈದ್ಯಕೀಯ ವಿಜ್ಞಾನಗಳ ವಿವಿ ಕುಲಪತಿ ಡಾ.ವೀರಣ್ಣ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.