ಕಾಡಾನೆ ದಾಳಿ, ಪೊಲೀಸರಿಂದ ಬಂಧನದ ಭೀತಿ; ಗ್ರಾಮ ತೊರೆಯುತ್ತಿರುವ ಕುಂದೂರು, ಹುಲ್ಲೇಮನೆ ನಿವಾಸಿಗಳು
ಮೂಡಿಗೆರೆ, ನ.23: ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ತಾಲೂಕಿನ ಹುಲ್ಲೆಮನೆ, ಕುಂದೂರು ಭಾಗದಲ್ಲಿ 3 ಕಾಡಾನೆಗಳು ಬೀಡು ಬಿಟ್ಟಿದ್ದು, ಕಾಫಿ, ಅಡಿಕೆ, ಬಾಳೆ ತೋಟಗಳನ್ನು ನಾಶ ಮಾಡುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಈ ಮಧ್ಯೆ ಶಾಸಕರ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಪೊಲೀಸರು ಆರೋಪಿಗಳಿಗಾಗಿ ಗ್ರಾಮದಲ್ಲಿ ಹುಡುಕಾಟ ಆರಂಭಿಸಿದ್ದು, ಪೊಲೀಸರು ಹಾಗೂ ಕಾಡಾನೆಗಳ ಭಯದಿಂದಾಗಿ ಗ್ರಾಮಸ್ಥರು ಗ್ರಾಮ ತೊರೆಯಲಾರಂಭಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಕುಂದೂರು, ಹುಲ್ಲೇಮನೆ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಸಾಮಾನ್ಯ ಸಂಗತಿ ಎಂಬಂತಾಗಿದ್ದು, ಕಾಡಾನೆಗಳ ಹಾವಳಿಯಿಂದಾಗಿ ಈ ಭಾಗದ ರೈತರು ತಾವು ಬೆವರುಸುರಿಸಿ ಬೆಳೆಸಿದ ಕಾಫಿ, ಅಡಿಕೆ, ಬಾಳೆ ತೋಟಗಳಿಗೆ ನುಗ್ಗಿ ನಾಶ ಮಾಡುತ್ತಿದ್ದು, ಕೆಲವೊಮ್ಮೆ ಕಾಡಾನೆಗಳ ದಾಳಿಗೆ ಗ್ರಾಮಸ್ಥರು ಪ್ರಾಣವನ್ನೂ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ರವಿವಾರ ಬೆಳಗ್ಗೆ ಶೋಭಾ ಎಂಬವರ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಇನ್ನೂ ಹಸಿಯಾಗಿರುವಾಗಲೇ ಇದೇ ಗ್ರಾಮದಲ್ಲಿ ಮತ್ತೆ ಮೂರು ಕಾಡಾನೆಗಳು ಬೀಡು ಬಿಟ್ಟಿದ್ದು, ರಾತ್ರಿ ವೇಳೆ ರೈತರ ಹೊಲ ಗದ್ದೆಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿವೆ. ಕುಂದೂರು, ಹುಲ್ಲೆಮನೆ ಗ್ರಾಮದಲ್ಲಿ ಸದ್ಯ ಕಾಫಿ, ಅಡಿಕೆ ಕಟಾವಿನಂತಹ ಕೃಷಿ ಚಟುವಟಿಕೆ ಆರಂಭವಾಗಿದ್ದು, ರೈತರು, ಕೃಷಿ ಕೂಲಿ ಕಾರ್ಮಿಕರು ಕಾಫಿ ತೋಟಗಳಲ್ಲಿ ಹಣ್ಣು ಕಟಾವು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಕಾಡಾನೆಗಳ ಭೀತಿಯಿಂದಾಗಿ ಕಾಫಿ ಕಟಾವು ಕೆಲಸ ನನೆಗುದಿಗೆ ಬೀಳುವಂತಾಗಿದೆ.
ಗ್ರಾಮ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ 3 ಕಾಡಾನೆಗಳ ಪೈಕಿ ಶೋಭಾ ಅವರ ಮೇಲೆ ದಾಳಿ ಮಾಡಿರುವ ಕಾಡಾನೆಯೂ ಇರುವ ಶಂಕೆ ಗ್ರಾಮಸ್ಥರದಾಗಿದ್ದು, ಈ ಆನೆಯ ಭೀತಿಯಿಂದಾಗಿ ಗ್ರಾಮಸ್ಥರು ಮನೆಗಳಿಂದ ಹೊರ ಬಾರದಂತಾಗಿದೆ. ರಾತ್ರಿ ವೇಳೆಯಂತೂ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸುತ್ತಿದ್ದು, ಕೆಲ ಗ್ರಾಮಸ್ಥರು ಕಾಡಾನೆಗಳ ಭೀತಿಯಿಂದಾಗಿ ಗ್ರಾಮವನ್ನೇ ತೊರೆಯುತ್ತಿದ್ದಾರೆಂದು ತಿಳಿದು ಬಂದಿದೆ.
ಈ ಮಧ್ಯೆ ಕಳೆದ ರವಿವಾರ ಸಂಜೆ ಕಾಡಾನೆ ದಾಳಿ ಸ್ಥಳಕ್ಕೆ ತೆರಳಿದ್ದ ವೇಳೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಸೇರಿದಂತೆ ಪೊಲೀಸರು ಸರಕಾರಿ ನೌಕರರ ಮೇಲೆ ಹಲ್ಲೆ, ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಹಾಗೂ ಸರಕಾರಿ ಆಸ್ತಿಪಾಸ್ತಿ ನಷ್ಟ ಪ್ರಕರಣದಡಿಯಲ್ಲಿ ಈಗಾಗಲೇ 8 ಮಂದಿ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದ್ದು, ಪೊಲೀಸರು ಮಂಗಳವಾರ ರಾತ್ರಿಯೂ ಬಂಧನ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಮೇಲೆ ಪೊಲೀಸರು ಗ್ರಾಮಸ್ಥರ ಮನೆಮನೆಗಳಿಗೆ ಭೇಟಿ ನೀಡಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಹುಲ್ಲೆಮನೆ, ಬೈರಗದ್ದೆ, ತಳವಾರ, ಕುಂಡ್ರ, ಕಣಗದ್ದೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಅನೇಕರನ್ನು ಬಂಧಿಸಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಿಂದಲೂ ಗ್ರಾಮಸ್ಥರು ಗ್ರಾಮ ತೊರೆಯಲಾರಂಭಿಸಿದ್ದಾರೆಂದು ತಿಳಿದು ಬಂದಿದೆ. ಗ್ರಾಮದ ಮಹಿಳೆಯರು ಮನೆಯಲ್ಲಿ ಗಂಡಸರಿಲ್ಲದ ಕಾರಣಕ್ಕೆ ಬೇರೆ ಊರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆನ್ನಲಾಗುತ್ತಿದೆ. ಪರಿಣಾಮ ಕುಂದೂರು, ಹುಲ್ಲೆಮನೆ ಗ್ರಾಮದಲ್ಲಿ ಸದ್ಯ ಸ್ಮಶಾನಮೌನ ಆವರಿಸಿದೆ.
ರವಿವಾರ ಶಾಸಕರ ಮೇಲೆ ಹಲ್ಲೆ ನಡೆದ ಘಟನೆ ಸಂಬಂಧ ಗ್ರಾಮಸ್ಥರು, ಮುಖಂಡರು ಶಾಸಕ ಕುಮಾರಸ್ವಾಮಿ ಅವರ ಬಳಿ ಕ್ಷಮೆಯಾಚಿಸಿದ್ದಾರೆ. ಪೊಲೀಸರು ಬಂಧಿಸಿರುವ ಗ್ರಾಮಸ್ಥರು ಉದ್ದೇಶಪೂರ್ವಕವಾಗಿ ಗಲಭೆ ನಡೆಸಿದ್ದಲ್ಲ, ಗ್ರಾಮಸ್ಥರು ಪದೇಪದೇ ಕಾಡಾನೆ ದಾಳಿಗೆ ತುತ್ತಾಗುತ್ತಿರುವ ಪರಿಣಾಮ ಆಕ್ರೋಶಗೊಂಡು ಉದ್ವಿಗ್ನರಾಗಿದ್ದಾರೆ. ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಅಂಗಲಾಚಿದ್ದಾರೆ. ಆದರೂ ಪೊಲೀಸರು ಮಾತ್ರ ಘಟನೆಯಲ್ಲಿ ಭಾಗಿಯಾದವರ ಬಂಧನಕ್ಕೆ ಬಲೆ ಬೀಸಿದ್ದು, ಇದರಿಂದಾಗಿ ಇಡೀ ಗ್ರಾಮಸ್ಥರು ಒಂದೆಡೆ ಪೊಲೀಸರ ಭೀತಿ, ಮತ್ತೊಂದೆಡೆ ಕಾಡಾನೆಗಳ ಆತಂಕದಿಂದಾಗಿ ಊರು ಬಿಡುವಂತಾಗಿದೆ. ಗ್ರಾಮಸ್ಥರ ಈ ಆತಂಕ ದೂರ ಮಾಡಲು ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಇದನ್ನೂ ಓದಿ: ಬೆಂಗಳೂರಿನ ಮೇಲ್ಸೇತುವೆಯಲ್ಲಿ ನಟ್ಟು, ಬೋಲ್ಟು ಸಡಿಲ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ