ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ಕಿಂಗ್‍ಪಿನ್, ಕೇಂದ್ರ ಸರಕಾರವೂ ಭಾಗಿ: ಸುರ್ಜೇವಾಲಾ ಆರೋಪ
ಬೆಂಗಳೂರು, ನ. 25: ‘ಮತದಾರರ ಮಾಹಿತಿ ಕಳವು ಆರೋಪ ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ಅವರು ಕಿಂಗ್‍ಪಿನ್ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜನರು ಕೇಳುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ. ಆರೋಪಿ ಹಾಗೂ ಆತನ ಆಪ್ತರ ಖಾತೆಗಳಿಗೆ ಕೇಂದ್ರ ಸರಕಾರದ ಸಂಸ್ಥೆಗಳಿಂದ ಹಣ ವರ್ಗಾವಣೆ ಹೇಗಾಯಿತು?’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಶುಕ್ರವಾರ ಇಲ್ಲಿನ ವರ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಸತ್ಯಾಂಶ ಹೊರಬರಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು. ನಾವು ಈ ವಿಚಾರವನ್ನು ಪ್ರತಿ ಕ್ಷೇತ್ರ ಹಾಗೂ ಬೂತ್‍ಗಳಿಗೆ ಕೊಂಡೊಯ್ಯುತ್ತೇವೆ. ಮತದಾರರ ಗುರುತಿನ ಚೀಟಿ ಅಕ್ರಮ ಪ್ರಕರಣದಲ್ಲಿ ಕೇಂದ್ರ ಸರಕಾರವೂ ಭಾಗಿಯಾಗಿದೆ’ ಎಂದು ದೂರಿದರು.
‘ಕೇಂದ್ರ ಸರಕಾರ ಸಿಟಿಜನ್ ಸರ್ವೀಸಸ್ ಸೆಂಟರ್ ನಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಗೂ ಪಾವತಿಯಾಗಿದೆ. ಇದರಿಂದ ಈ ಹಗರಣದ ಸ್ವರೂಪ ಬೃಹದಾಕಾರವಾಗಿರುವುದು ಸ್ಪಷ್ಟ. ಜನರ ಹಣ ಲೂಟಿ ಮಾಡಿ, ಅವ್ಯವಹಾರ ನಡೆಸಲಾಗಿದೆ’ ಎಂದು ಅವರು ಆರೋಪಿಸಿದರು.
ಬಸವರಾಜ ಬೊಮ್ಮಾಯಿ ಜತೆಗೆ ರವಿಕುಮಾರ್ ಹಾಗೂ ಅವರ ಆಪ್ತರ ಖಾತೆಗಳಿಗೆ ಕೇಂದ್ರ ಸರಕಾರದ ಸಂಸ್ಥೆಯಿಂದ ಎಷ್ಟು ಕೋಟಿ ಹಣ ವರ್ಗಾವಣೆ ಮಾಡಲಾಗಿದೆ? ಈ ಹಣ ಪಡೆದವರು ಯಾರು ಎಂಬುದು ತನಿಖೆ ಮೂಲಕ ಬಹಿರಂಗವಾಗಬೇಕು. ಬಿಜೆಪಿ ಸರಕಾರ ಈ ಪ್ರಕರಣ ಮುಚ್ಚಿ ಹಾಕಲು ಹುನ್ನಾರ ನಡೆಸಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಕ್ರಮದ ಭರವಸೆ: ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಮತದಾರರ ಮಾಹಿತಿ ಕಳವು, ಮಾರಾಟ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದಿರುವ ಬಗ್ಗೆ ತನಿಖೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ಆಯೋಗವು ಉಪ ಆಯುಕ್ತರನ್ನು ತನಿಖೆಗೆ ನೇಮಕ ಮಾಡಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದರು.
‘ಈ ಮಧ್ಯೆ ತಮ್ಮನ್ನು ತಾವೇ ಗಂಡಸು ಎಂದು ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದವರು ಹಾಗೂ ಚಿಲುಮೆ ಸಂಸ್ಥೆಯ ಪ್ರಮುಖ ಕಿಂಗ್‍ಪಿನ್‍ಗಳು ಕೇಂದ್ರ ಸರಕಾರದ ಸಂಸ್ಥೆಗಳಿಂದ ಹಲವು ವ್ಯಕ್ತಿಗಳ ಖಾತೆಗೆ ಹಣ ಹಾಕಿಸಿ, ಅವುಗಳನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಹಣವನ್ನು ಯಾರು ಯಾವ ಕಾರಣಕ್ಕೆ ಯಾರಿಗೆ ವರ್ಗಾವಣೆ ಮಾಡಿದ್ದಾರೆಂಬ ಅಂಶ ಬೆಳಕಿಗೆ ಬರಬೇಕು’ ಎಂದು ಆಗ್ರಹಿಸಿದರು.
‘ಪ್ರತಿ ಬೂತ್‍ಗಳಲ್ಲಿ ಮತಗಳನ್ನು ಉಳಿಸಿಕೊಳ್ಳಲು ಜಾಗೃತಿ ಮೂಡಿಸಲು ನೀಡಲಾಗುವುದು. ಈ ಸರಕಾರ ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳನ್ನು ಕಿತ್ತುಹಾಕುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅರ್ಜಿ ಹಾಕಿರುವ ಎಲ್ಲರೂ ಹಳ್ಳಿಗಳಿಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಮಾರ್ಗದರ್ಶನ ನೀಡಲಾಗುವುದು’ ಎಂದು ಅವರು ತಿಳಿಸಿದರು.