ಸಿದ್ದರಾಮಯ್ಯ ಚುನಾವಣೆಗೆ ಎಲ್ಲಿ ನಿಂತರೂ ಗೆಲ್ಲುತ್ತಾರೆ, ಆದರೆ...: BJP ಎಂಎಲ್ ಸಿ ಎಚ್.ವಿಶ್ವನಾಥ್
ಮೈಸೂರು: 'ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರ, ವರುಣಾದಲ್ಲಿ ಎಲ್ಲಿ ನಿಂತರೂ ಗೆಲ್ಲುತ್ತಾರೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಸಿದ್ಧರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ವರುಣಾ, ಕೋಲಾರ ಎಲ್ಲಿ ನಿಂತರೂ ಗೆಲ್ಲುತ್ತಾರೆ. ಆದರೆ, ಚಾಮುಂಡೇಶ್ವರಿಯಲ್ಲಿ ಸೋಲಿಸಿದ ಹಾಗೆ ಮತ್ತೆ ಸೋಲಿಸಲು ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳು ಈಗ ತಂತ್ರಗಾರಿಕೆಯ ಅ ಆ ಇ ಈ ಪ್ರಾರಂಭಿಸಿವೆ'' ಎಂದು ಹೇಳಿದರು.
''ನನಗೆ ಎಲ್ಲಿ ತಪ್ಪು ಕಾಣುತ್ತದೋ ಅಲ್ಲಿ ಮಾತನಾಡುತ್ತೇನೆ. ನಾನು ಮಾತನಾಡುವುದನ್ನು ಬಿಜೆಪಿಯವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ಇಲ್ಲವೋ ನನ್ನ ಸಿದ್ಧಾಂತವನ್ನು ನಾನು ವ್ಯಕ್ತಪಡಿಸುತ್ತಾ ಬರುತ್ತೇನೆ'' ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಹೋಗುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಎಚ್.ವಿಶ್ವನಾಥ್, ''ನನಗೆ ಮಲ್ಲಿಕಾರ್ಜುನ ಖರ್ಗೆ ಎಷ್ಟು ಆತ್ಮೀಯರೋ ಅಷ್ಟೇ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಆತ್ಮೀಯರು'' ಎಂದು ಉತ್ತರ ನೀಡಿದರು.