ವಿದ್ಯಾರ್ಥಿಗಳ ಬ್ಯಾಗ್‍ನಲ್ಲಿ ಕಾಂಡೋಮ್ ಪತ್ತೆ ಹಿನ್ನೆಲೆ; ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವಂತೆ ಒತ್ತಾಯ
Update: 2022-11-30 17:35 GMT
ಬೆಂಗಳೂರು, ನ.30: ವಿದ್ಯಾರ್ಥಿಗಳ ಬ್ಯಾಗ್‍ನಲ್ಲಿ ಕಾಂಡೋಮ್ ಸೇರಿದಂತೆ ಮತ್ತಿತರ ವಸ್ತುಗಳು ಪತ್ತೆಯಾಗಿರುವ ಕುರಿತು ರಾಜ್ಯ ಸರಕಾರವು ಗಂಭೀರವಾಗಿ ಚಿಂತನೆ ಮಾಡುವ ಅಗತ್ಯವಿದ್ದು, ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ಜಾರಿ ಮಾಡಲು ಶಿಕ್ಷಣ ಸಚಿವರು ಸಭೆಯನ್ನು ಆಯೋಜಿಸಬೇಕು ಎಂದು ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ.
ಬ್ಯಾಗ್‍ನಲ್ಲಿ ಕಾಂಡೋಮ್ ಪತ್ತೆ ಆಗಿರುವ ಕುರಿತು ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಹೀಗಾಗಿ ಲೈಂಗಿಕ ಶಿಕ್ಷಣದ ಅಗತ್ಯತೆ ಮತ್ತು ಸಾಧಕ ಕುರಿತು ಚರ್ಚಿಸಲು ಶಿಕ್ಷಣ ಕ್ಷೇತ್ರದ ಸಂಘಟನೆಗಳು, ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಆಯೋಜಿಸಬೇಕು ಎಂದು ಸಮಿತಿಯ ಅಧ್ಯಕ್ಷ ಬಿ.ಎನ್. ಯೋಗಾನಂದ ಒತ್ತಾಯಿಸಿದ್ದಾರೆ.