ಸಂವಿಧಾನದ ಆಶಯ ಈಡೇರಿಸುವುದಕ್ಕೂ ಕಮಿಷನ್ ನೀಡಬೇಕೇ?: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನೆ
ಬೆಂಗಳೂರು, ಡಿ. 1: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಅನ್ನು ನಿಲ್ಲಿಸಬೇಕೆಂಬ ಕೇಂದ್ರ ಸರಕಾರಕ್ಕೆ ಶಿಕ್ಷಣ ಪಡೆಯುವುದಕ್ಕಾಗಿ ಕಷ್ಟ ಪಡುತ್ತಿರುವ ವಿದ್ಯಾರ್ಥಿಗಳ ಬದುಕಿನ ಪರಿಚಯ ಇದ್ದಂತಿಲ್ಲ’ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳಿಗೂ ಸರಿಯಾಗಿ ಸ್ಕಾಲರ್ ಶಿಪ್ ನೀಡದೆ ಅವರ ಶೈಕ್ಷಣಿಕ ಬದುಕಿಗೆ ತೊಂದರೆ ಮಾಡಿರುವ ಸರ್ಕಾರವು ಕೂಡಲೇ ಅವರ ಹಕ್ಕಿಗೆ ಅನುಗುಣವಾಗಿ ಸಲ್ಲಬೇಕಾದ ವಿದ್ಯಾರ್ಥಿ ವೇತನ ನೀಡಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿಗರೇ, ಸಂವಿಧಾನ ದಿನಾಚರಣೆ ಮಾಡುವ ಮೂಲಕ ಬರೀ ಪ್ರಚಾರ ಪಡೆದರೆ ಸಾಲದು, ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಗಳ ಈಡೇರಿಕೆಗೂ ಶ್ರಮಿಸಬೇಕು ತಾನೇ? ಸಂವಿಧಾನದ ಈ ಆಶಯಗಳನ್ನು ಈಡೇರಿಸುವುದಕ್ಕೂ ನಿಮಗೆ ಶೇ.40ರಷ್ಟು ಕಮಿಷನ್ ನೀಡಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.