ತಿ.ನರಸೀಪುರ: ಚಿರತೆ ದಾಳಿ; ಯುವತಿ ಮೃತ್ಯು
ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ
ಮೈಸೂರು,ಡಿ.1: ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನಲ್ಲಿ ಕಳೆದ ಒಂದು ತಿಂಗಳ ಹಿಂದೆ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿ ಗ್ರಾಮದ ಯುವಕನೊಬ್ಬ ಬಲಿಯಾದ ಘಟನೆ ಮಾಸುವ ಮುನ್ನವೇ ಚಿರತೆ ಮತ್ತೊಂದು ಬಲಿಯನ್ನು ಪಡೆದಿದೆ.
ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ರಮೇಶ್ ಎಂಬುವವರ ಪುತ್ರಿ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಮೇಘನಾ (22) ಎಂಬ ಯುವತಿಯು ಚಿರತೆ ದಾಳಿಯಿಂದ ಮೃತಪಟ್ಟಿದ್ದು, ತಾಲೂಕಿನಲ್ಲಿ ಚಿರತೆ ದಾಳಿಗೆ ಎರಡು ಬಲಿಯಾದಂತಾಗಿದೆ.
ಯುವತಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಕೂಡಲೇ ಯುವತಿಯನ್ನು ಚಿಕಿತ್ಸೆಗಾಗಿ ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಚಿರತೆ ಹಿಡಿಯುವಂತೆ ಸಾರ್ವಜನಿಕರು, ಮಠಾಧೀಶರು ನಿನ್ನೆಯಷ್ಟೇ ಪ್ರತಿಭಟನೆ ನಡೆಸಿದ್ದರೂ, ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸ್ಥಳಕ್ಕೆ ಶಾಸಕ ಅಶ್ವಿನ್ ಕುಮಾರ್ ಭೇಟಿ ನೀಡಿ ದುರ್ಘಟನೆಗೆ ಸಂತಾಪ ಸೂಚಿಸಿದರು. ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಭೇಟಿ ನೀಡಬೇಕು ಎಂದು ಪಟ್ಟುಹಿಡಿದರು.