ಮುಳಬಾಗಿಲು | ದಲಿತ ಯುವಕನಿಗೆ ದೌರ್ಜನ್ಯ, ಆತ್ಮಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2022-12-03 11:56 GMT

ಮುಳಬಾಗಿಲು (ಕೋಲಾರ) ಡಿ.3: ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ದಲಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಇಲ್ಲಿನ ನಂಗಲಿ ಪೊಲೀಸರು ಬಂಧಿಸಿದ್ದಾರೆ. 

ಮುಳಬಾಗಿಲು ತಾಲೂಕಿನ  ಬೈರಕೂರು ಸಮೀಪದ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗಕ್ಕೆ ಸೇರಿದ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ, ಮತ್ತು ಮುನಿವೆಂಕಟಪ್ಪ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. 

ಇತ್ತೀಚೆಗೆ ಬೈಕ್ ಹಿಂದಿಕ್ಕಿದ ಎಂಬ ಕಾರಣಕ್ಕೆ ಉದಯ್ ಕಿರಣ್ ಎಂಬ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿ, ದೌರ್ಜನ್ಯ ಎಸಗಿದ ಆರೋಪದಲ್ಲಿ ನಂಗಲಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.

'ಯುವಕನ ಆತ್ಮಹತ್ಯೆ ಬಳಿಕ  ಆರೋಪಿಗಳು ತಲೆಮರೆಸಿಕೊಂಡಿದ್ದು, ಪ‍ತ್ತೆಗೆ ಶೋಧ ಮುಂದುವರಿಸಿದ್ದೆವು. ಶನಿವಾರ ಅವರೆಲ್ಲರನ್ನು ಬಂಧಿಸಿ, ತನಿಖೆ ತೀವ್ರಗೊಳಿಸಿದ್ದೇವೆ' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್‌ ಮಾಹಿತಿ ನೀಡಿದ್ದಾರೆ. 

[ಬಂಧಿತ ಆರೋಪಿಗಳು]


ಪ್ರಕರಣದ ವಿವರ:  ನವೆಂಬರ್ 30ರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗದ ರಾಜು ಬಿನ್ ಗೋಪಾಲಕೃಷ್ಣಪ್ಪ ರವರ ದ್ವಿಚಕ್ರ ವಾಹನವನ್ನು ಬೇವಹಳ್ಳಿಯ ಉದಯ್ ಕಿರಣ್ ಮತ್ತು ನಾಗಾರಾಜು ಓವರ್ ಟೇಕ್ ಮಾಡಿದರು ಎಂದು ಆರೋಪಿಸಿ, ಬೈರಕೂರಿನಲ್ಲಿ ಉದಯ್ ಕಿರಣ್ ವಾಹನವನ್ನು ಅಡ್ಡಗಟ್ಟಿ ನಿಂದಿಸಿ, ಹಲ್ಲೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ ನಂತರವೂ ಸಹ ಕಾಡೆನಹಳ್ಳಿಯಿಂದ ವಾಪಸ್ಸು ಬರುತ್ತಿದ್ದ ಉದಯ್ ಕಿರಣ್ ಮತ್ತು ನಾಗರಾಜರನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ಬಳಿ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ, ಮತ್ತು ಮುನಿವೆಂಕಟಪ್ಪ ಬಳಿ ಅಡ್ಡಗಟ್ಟಿ, ಹೊಡೆದು ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಿತ್ತುಕೊಂಡು ನಿಮ್ಮ ಮನೆಯವರನ್ನು ಕರೆದುಕೊಂಡು ಬನ್ನಿ ಎಂದು ದೌರ್ಜನ್ಯವೆಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ನಂತರ ತನ್ನ ವಾಹನ ಮತ್ತು ಮೊಬೈಲ್ ಕೇಳಲು ಹೋದ ಉದಯ್ ಕಿರಣ್ ನನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ರಚ್ಚೆ ಕಟ್ಟೆಯ ಮರಕ್ಕೆ ಕಟ್ಟಿ ಹಾಕಿ, ಹೊಡೆದು, ಜಾತಿ ನಿಂದನೆ ಮಾಡಿ ಅತಿಹೀನವಾಗಿ ಅವಮಾನಿಸಿದ್ದಾರೆ. ಈ ಕಾರಣಕ್ಕೆ ಉದಯ್ ಕಿರಣ್ ಅವಮಾನ ತಾಳಲಾರದೇ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. 

Similar News