ಕಾಂಗ್ರೆಸ್ ಮುಖಂಡರು ದತ್ತಾತ್ರೇಯನ ಆಸ್ತಿ ಕಬಳಿಸಿದ್ದಾರೆ, ತನಿಖೆಗೆ ಸರಕಾರ ಆದೇಶಿಸಿದೆ: ಸಿ.ಟಿ.ರವಿ
ಚಿಕ್ಕಮಗಳೂರು, ಡಿ.4: ದತ್ತಾತ್ರೇಯ ಸ್ವಾಮಿಯ ಆಸ್ತಿ ಕಬಳಿಸುವ ಸಂಚಿನ ಭಾಗವಾಗಿ ಪಿತೂರಿ ಮಾಡಿ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ದತ್ತಾತ್ರೇಯ ಸ್ವಾಮಿಯ ಆಸ್ತಿ ಹೊಡೆಯುವ ಉದ್ದೇಶದಿಂದಲೇ ಈ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ದೇವರ ಆಸ್ತಿಯನ್ನು ಯಾರ್ಯಾರು ಕಬಳಿಸಿದ್ದಾರೆಂಬ ಮಾಹಿತಿ ಸಿಕ್ಕಿದ್ದು, ಇದರಲ್ಲಿ ಕಾಂಗ್ರೆಸ್‍ನವರೂ ಇದ್ದಾರೆ. ಈ ಸಂಬಂಧ ತನಿಖೆಗೆ ಕೋರಿದ್ದು, ಸರಕಾರ ತನಿಖೆಗೆ ಆದೇಶವನ್ನೂ ಮಾಡಿದೆ. ದೇವರ ಆಸ್ತಿಯನ್ನು ಕಬಳಿಸುವವರನ್ನು ಸುಮ್ಮನೆ ಬಿಡಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ಸಂಬಂಧ ಮಾತನಾಡಿರುವ ಅವರು, ಬಾಬಾ ಬುಡನ್‍ದರ್ಗಾ ಹಾಗೂ ದತ್ತಪೀಠ ಒಂದೇ ಅಲ್ಲ, ದತ್ತಾತ್ರೇಯ ಸ್ವಾಮಿಯ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದಿಂದಲೇ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಕ್ಲಬ್ ಮಾಡಿ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ದರ್ಗಾ, ದತ್ತಪೀಠ ಒಂದೇ ಸ್ಥಳದಲ್ಲಿಲ್ಲ. ಅವರೆಡೂ ಇರುವುದು ಬೇರೆ ಬೇರೆ ಸ್ಥಳಗಳಲ್ಲಿ. ಬಾಬಾ ಬುಡನ್ ದರ್ಗಾ ಇರುವುದು ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿಯಲ್ಲಿ, ಈ ಸಂಬಂಧ ಸರಕಾರಿ ದಾಖಲೆಗಳೇ ಇವೆ. ಇವೆರೆಡೂ ಒಟ್ಟಾಗಿರುವ ಬಗ್ಗೆ ಯಾವ ಸರಕಾರಿ, ಕಂದಾಯ ದಾಖಲೆಗಳೇ ಇಲ್ಲ, ದರ್ಗಾಕ್ಕೂ ದತ್ತಾತ್ರೇಯ ಪೀಠಕ್ಕೂ ಸಂಬಂಧವೇ ಇಲ್ಲ. ದೇವರ ಆಸ್ತಿ, ಜಮೀನು ಕಬಳಿಸುವ ಸಂಚಿನ ಭಾಗವಾಗಿ ಎರಡೂ ಸಂಸ್ಥೆಗಳನ್ನು ಕ್ಲಬ್ ಮಾಡಿ ದತ್ತಾತ್ರೇಯ ಪೀಠವನ್ನು ಕಬಳಿಸಿ ದರ್ಗಾವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.
ದತ್ತಾತ್ರೇಯ ಸ್ವಾಮಿಯ ಹೆಸರಿನಲ್ಲಿ 1861 ಎಕರೆ ಜಮೀನು ಇದೆ. ಇದನ್ನು ಕಬಳಿಸಲು ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾವನ್ನು ಹುಟ್ಟು ಹಾಕಲಾಗಿದೆ. ಆಸ್ತಿಯನ್ನು ಕಬಳಿಸಿರುವವರಲ್ಲಿ ಕಾಂಗ್ರೆಸ್‍ನವರೂ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸಂಬಂಧ ನಾನು ಸರಕಾರವನ್ನು ತನಿಖೆಗೆ ಕೋರಿದ್ದು, ಸರಕಾರ ತನಿಖೆಗೆ ಆದೇಶವನ್ನೂ ನೀಡಿದೆ ಎಂದರು.