ಕಾನೂನು ಉಲ್ಲಂಘನೆ ಮಾಡಿದರೆ ಮಹಾರಾಷ್ಟ್ರ ಸಚಿವರ ಮೇಲೂ ಕ್ರಮ: ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ
ಬೆಂಗಳೂರು, ಡಿ.5: 'ಈಗಿರೋ ವಾತಾವರಣದಲ್ಲಿ ಮಹಾರಾಷ್ಟ್ರ ರಾಜ್ಯ ಸಚಿವರು ಬೆಳಗಾವಿಗೆ ಭೇಟಿ ನೀಡಿ ಕಾನೂನು ಉಲ್ಲಂಘನೆ ಮಾಡಿದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ''ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಅವರ ಮೇಲೆ ಕ್ರಮ ತಗೋತೀವಿ. ಅವರು ಸಚಿವರು ಆದರೂ ಬಿಡೋದಿಲ್ಲ'' ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸಿಎಂ ಅವರು ಇದರ ಬಗ್ಗೆ ಸಂಪೂರ್ಣವಾಗಿ ಹೇಳಿದ್ದಾರೆ. ನಮ್ಮ ರಾಜ್ಯ-ಮಹಾರಾಷ್ಟ್ರದ ಡಿಜಿಗಳು, ಎಡಿಜಿಪಿಗಳ ಸಭೆ ನಡೆದಿದೆ. ಇದೀಗ ಭಾವನಾತ್ಮಕವಾಗಿ ಏನಾದರೂ ಕೆಣಕಲು ಬಂದರೆ ನಾವು ಬಿಡುವುದಿಲ್ಲ. ಈ ಬಗ್ಗೆ ಪೊಲೀಸರು ಎರಡು ಭಾಗದ ಜನರಿಗೆ ಎಚ್ಚರಿಕೆ ನೀಡಿದ್ದಾರೆಂದು ತಿಳಿಸಿದರು.
--------------------------------------------------
'ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರೋದು ಬೇಡ ಎಂದು ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳ ಮೂಲಕ ಮಹಾರಾಷ್ಟ್ರದ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಲಾಗಿದೆ. ಅದಾಗ್ಯೂ ಅವರು ಬೆಳಗಾವಿಗೆ ಬರೋ ಸಾಹಸ ಮಾಡಿದರೆ ನಮ್ಮ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ'
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.