ವೋಟರ್ ಐಡಿ ಹಗರಣ: ಸಿಜೆ ಉಸ್ತುವಾರಿಯಲ್ಲಿ SIT ರಚನೆಗೆ ರೈಟ್ಸ್ ಫೌಂಡೇಶನ್‍ನಿಂದ ಹೈಕೋರ್ಟ್ ಗೆ ಮನವಿ
ಬೆಂಗಳೂರು, ಡಿ.5: ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಅಕ್ರಮದ ಕುರಿತು ವಿಶೇಷ ತನಿಖಾ ದಳ ರಚಿಸಿ, ತಮ್ಮ ಸುಪರ್ದಿನಲ್ಲಿ ತನಿಖೆ ನಡೆಸಬೇಕೆಂದು ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಸಹೋದರ ನ್ಯಾಯಮೂರ್ತಿಗಳನ್ನು ಉಲ್ಲೇಖಿಸಿ ಸಿಟಿಜನ್ಸ್ ರೈಟ್ಸ್ ಫೌಂಡೇಶನ್(ನಾಗರಿಕ ಹಕ್ಕುಗಳ ಪ್ರತಿಷ್ಠಾನ-ಸಿಆರ್‍ಎಫ್) ಸೋಮವಾರ ಪತ್ರ ಬರೆದಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷವೂ ಅಧಿಕಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಕ್ರಮವನ್ನು ಬಯಲಿಗೆ ಎಳೆಯಲು ಸಿಜೆ ಉಸ್ತುವಾರಿಯಲ್ಲಿ ಹೈಕೋರ್ಟ್ ಎಸ್‍ಐಟಿ ರಚಿಸಬೇಕೆಂದು ಸಿಆರ್‍ಎಫ್ ಅಧ್ಯಕ್ಷ ಕೆ.ಎ.ಪೌಲ್ ಅವರು ಸಹಿ ಮಾಡಿರುವ ಪತ್ರದಲ್ಲಿ ಕೋರಲಾಗಿದೆ.
ಸರಕಾರಿ ಅಧಿಕಾರಿಗಳ ವೇಷದಲ್ಲಿ ಮತದಾರರ ದತ್ತಾಂಶ ಸಂಗ್ರಹಿಸುವ ಮೂಲಕ ಚಿಲುಮೆ ಸಂಸ್ಥೆಯು ವಂಚನೆ ಎಸಗಿದ್ದು, ತನ್ನ ಸಿಬ್ಬಂದಿಗೆ ಬೂತ್ ಮಟ್ಟದ ಅಧಿಕಾರಿಗಳ(ಬಿಎಲ್‍ಒ) ಕಾರ್ಡ್‍ಗಳನ್ನೂ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ತಿಳಿದೇ ಚಿಲುಮೆ ಸಂಸ್ಥೆಯು ಈ ಕೃತ್ಯ ನಡೆಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಚಿಲುಮೆ ಸಂಸ್ಥೆಯ ಹಿನ್ನೆಲೆ ಪರಿಶೀಲನೆ ಮಾಡದೇ ಬಿಬಿಎಂಪಿಯು ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ಹೊಣೆಗಾರಿಕೆಯನ್ನು ಅರ್ಜಿ ಸಲ್ಲಿಸಿದ ತಕ್ಷಣ ಚಿಲುಮೆಗೆ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.