ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್ ಸಂಚಾರ; ಕೆಎಸ್ಸಾರ್ಟಿಸಿ ಚಿಂತನೆ

Update: 2022-12-06 17:07 GMT

ಬೆಂಗಳೂರು, ಡಿ.6: ಈ ತಿಂಗಳಿಂದ ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕಲ್ ಬಸ್‍ಗಳನ್ನು ರಸ್ತೆಗೆ ಬಿಡಲು ಕೆಎಸ್ಸಾರ್ಟಿಸಿ ಚಿಂತನೆ ನಡೆಸಿದ್ದು, ಮೈಸೂರಿಗೆ ಡಿ.15ರಿಂದ ವಿದ್ಯುತ್ ಚಾಲಿತ ಎಲೆಕ್ಟ್ರಿಕಲ್ ಬಸ್‍ಗಳ ಸೇವೆ ಆರಂಭಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.

ಇದು ಕರ್ನಾಟಕದಲ್ಲಿ ಎರಡು ನಗರಗಳ ನಡುವೆ ಆರಂಭವಾಗಲಿರುವ ಮೊದಲ ಎಲೆಕ್ಟ್ರಿಕಲ್ ಬಸ್ ಮಾರ್ಗವಾಗಲಿದೆ. ನಂತರದ ದಿನಗಳಲ್ಲಿ ಬೆಂಗಳೂರಿನಿಂದ ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ನಗರಗಳಿಗೂ ಎಲೆಕ್ಟ್ರಿಕ್ ಬಸ್‍ಗಳು ಸಂಚರಿಸಲಿವೆ. 

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ಬಸ್ ನಿಲ್ದಾಣದಲ್ಲಿ ಬಸ್ ಚಾಜಿರ್ಂಗ್ ಯೂನಿಟ್ ಸ್ಥಾಪಿಸುವ ಪ್ರಕ್ರಿಯೆಯೂ ಈಗಾಗಲೇ ಆರಂಭವಾಗಿದೆ. ಕೆಎಸ್ಸಾರ್ಟಿಸಿಯು ಹೊಸ ಮಾದರಿಯ ವೋಲೊ 9600 ಮಾಡೆಲ್‍ನ ಬಿಎಸ್-6 ಮಾನದಂಡವನ್ನು ಪೂರೈಸುವ 20 ಅತ್ಯಾಧುನಿಕ ಐರೋಪ್ಯ ಶೈಲಿಯ ಬಸ್‍ಗಳನ್ನು ರಸ್ತೆಗೆ ಇಳಿಸಲಿದೆ.

ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 25 ಇ-ಬಸ್ ಗಳನ್ನು ಖರೀದಿಸುವ ನಿರೀಕ್ಷೆಯಿದೆ. ಫೆಬ್ರವರಿ ಅಂತ್ಯದ ವೇಳೆಗೆ ಇನ್ನೂ 25 ಇ-ಬಸ್‍ಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಇ-ಬಸ್‍ಗಳಿಗೆ ವಿಶೇಷವಾಗಿ ಹೆಸರು ಮತ್ತು ಟ್ಯಾಗ್‍ಲೈನ್ ಸೂಚಿಸಲು ರಾಜ್ಯ ಸಾರಿಗೆ ಸಂಸ್ಥೆ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದೆ. ವಿಶೇಷ ಹೆಸರು ಸೂಚಿಸಿದವರಿಗೆ ಪ್ರತಿ ಮಾದರಿಯ ವಾಹನಗಳಿಗೆ ಸೂಚಿಸುವ ಟ್ಯಾಗ್‍ಲೈನ್, ಬ್ರಾಂಡ್ ನೇಮ್‍ಗೆ ತಲಾ 10 ಸಾವಿರ ನಗದು ಬಹುಮಾನ, ಗ್ರಾಫಿಕ್ ವಿನ್ಯಾಸಕ್ಕೆ 25 ಸಾವಿರ ರೂ.ನೀಡಲಾಗುವುದು ಮತ್ತು ಹೆಸರು ನೀಡುವುದಕ್ಕೆ 10 ಸಾವಿರ ರೂ. ಘೋಷಣೆ ಮಾಡಲಾಗಿದೆ.

Similar News