ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಲಿದೆ: ಸಿಎಂ ಬೊಮ್ಮಾಯಿ

''ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ''

Update: 2022-12-07 13:17 GMT

ಬೆಂಗಳೂರು, ಡಿ.7: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ತುಮಕೂರು ಜಿಲ್ಲೆಯ ಕುಣಿಗಲ್‍ನಲ್ಲಿ ಆಯೋಜಿಸಲಾಗಿದ್ದ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಬಿಜೆಪಿ ಪರವಾಗಿ ಜನಬೆಂಬಲ ವ್ಯಕ್ತವಾಗುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ಮತ್ತು ನಮ್ಮ ಸರಕಾರದ ಕಾರ್ಯಕ್ರಮಗಳಿಗೆ ಜನರು ಬೆಂಬಲ ಕೊಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಗಾಳಿ ಬೀಸುತ್ತಿದೆ. ಈ ಬಾರಿ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ಅಭೂತಪೂರ್ವ ಅಂತರದಿಂದ ಗೆಲ್ಲಲಿದೆ ಎಂದರು.

ಅತಿ ಹೆಚ್ಚು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಮುಖಂಡರು ಅಧಿಕಾರ ಉಳಿಸಿಕೊಳ್ಳಲು ಜನರನ್ನು ಮರುಳು ಮಾಡಿದ್ದರು. ಕಾಂಗ್ರೆಸ್ಸಿಗರ ಜಾತಿ ಮತಗಳಲ್ಲಿ ದ್ವೇಷ ತುಂಬುವುದು, ಧರ್ಮ ಒಡೆಯುವ ಕಾರ್ಯವನ್ನು ಮಾಡಿದ್ದರು. ಇದನ್ನು ಜನರು ಮನಗಂಡಿದ್ದಾರೆ. ಸಾಮಾಜಿಕ ನ್ಯಾಯದ ಭಾಷಣ ಮಾಡಿದ ಕಾಂಗ್ರೆಸ್ ಪಕ್ಷದವರು ತಮ್ಮ ಆಡಳಿತದಲ್ಲಿ ತಾವಷ್ಟೇ ಮುಂದೆ ಹೋಗಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ, 32 ಸಾವಿರ ಕೋಟಿ ಖರ್ಚು ಮಾಡಿ ನೀರಾವರಿ ಕಾರ್ಯ ಮಾಡಿದೆ. ಆದರೆ, ನೀರಾವರಿ ಹೆಸರಿನಲ್ಲಿ ಹಣವನ್ನು ಕಾಂಗ್ರೆಸ್ಸಿಗರು ಜೇಬಿಗೆ ಇಳಿಸಿದ್ದರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿಯಂತಿದೆ. ಅದು ಲೋಕಾಯುಕ್ತವನ್ನು ಮುಚ್ಚುವ ಕೆಲಸ ಮಾಡಿತ್ತು. ಕೇಂದ್ರ ನೀಡುವ ಅಕ್ಕಿಗೆ ‘ಅನ್ನ ಭಾಗ್ಯ’ ಎಂದು ತಮ್ಮ ಫೊಟೋ ಹಾಕಿಕೊಂಡಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗಲೇ ಪಡಿತರ ಅಕ್ಕಿ ನೀಡಲಾಗುತ್ತಿತ್ತು. ಸಿದ್ದರಾಮಯ್ಯ ಸರಕಾರ ಪಡಿತರ ಅಕ್ಕಿಯ ಪ್ರಮಾಣ ಕಡಿಮೆ ಮಾಡಿತ್ತು ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಮುಂದಿನ ದಿನಗಳಲ್ಲಿ ಕುಣಿಗಲ್ ತಾಲೂಕಿನ ರೈತರಿಗೆ ಅನ್ನ ಕೊಡುವ 2 ಯೋಜನೆಗಳನ್ನು ಸರಕಾರ ಅನುಷ್ಠಾನಕ್ಕೆ ತರಲಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ನಾವು ಜನರ ಆಶೀರ್ವಾದದೊಂದಿಗೆ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದೇವೆ. ತುಮಕೂರು ಜಿಲ್ಲೆ ರಾಜ್ಯದ ಅತ್ಯಂತ ಪ್ರಮುಖ ಜಿಲ್ಲೆಯಾಗಿ ಹೊರಹೊಮ್ಮಲಿದೆ. ತುಮಕೂರಿನ ಸರ್ವತೋಮುಖ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಮುಂಬರುವ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಎಂದು ತಿಳಿಸಿದರು.  ಎಂದು ಅವರು ತಿಳಿಸಿದರು. 

ಸಮಾವೇಶದಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್, ಕೆ.ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News