ಬೀದಿಗೆ ಬಂದ ಕಾಂಗ್ರೆಸ್​ ನಾಯಕರ ಒಳಜಗಳ: ಬಿಜೆಪಿ ಟೀಕೆ

Update: 2022-12-10 17:07 GMT

ಬೆಂಗಳೂರು, ಡಿ.10: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಒಳಜಗಳ ಬೀದಿಗೆ ಬಂದಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಈ ಇಬ್ಬರ ರಂಪಾಟಗಳು ಕಾರ್ಯಕರ್ತರ ತೋಳುಗಳಲ್ಲಿ ಕಾಣುತ್ತಿರುವುದು ಕಾಂಗ್ರೆಸ್ ಪಕ್ಷದ ಅಧಃಪತನದ ಸೂಚನೆ ಎಂದು ಬಿಜೆಪಿ ಟೀಕಿಸಿದೆ.

ಶನಿವಾರ ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಟಿಕೆಟ್‍ಗಾಗಿ ಅರ್ಜಿ ಎಂಬುದು  ಡಿ.ಕೆ. ಶಿವಕುಮಾರ್ ತಮ್ಮ ವಿರೋಧಿ ಸಿದ್ದರಾಮಯ್ಯರನ್ನು ಹಣಿಯಲು ತೋಡಿರುವ ಖೆಡ್ಡ. ಇದರಲ್ಲಿ ಅವರ ಹೊರತಾಗಿ ಮಿಕ್ಕೆಲ್ಲರು ಬಿದ್ದಿರುವುದರಿಂದಲೇ ಈ ಹಾದಿಬೀದಿ ರಂಪ ಶುರುವಾಗಿರುವುದು. ಓರ್ವನ ಸ್ವಾರ್ಥ ಲಾಲಸೆಗೆ ಕಾರ್ಯಕರ್ತರು ಕತ್ತಿನ ಪಟ್ಟಿ ಹಿಡಿದುಕೊಂಡು ಹೊಡೆದಾಡುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಹೇಳಿದೆ.

ರೌಡಿಸಂ ಕಾಂಗ್ರೆಸ್ ಪಕ್ಷದ ಶಕ್ತಿ. ಸಂಜಯ್ ಗಾಂಧಿ ಕುಖ್ಯಾತ ರೌಡಿ ಜಯರಾಜನನ್ನು ಬೆಳೆಸಿದರು. ಅದೇ ಹಾದಿಯಲ್ಲಿ ಬಂದು ಕೊತ್ವಾಲ ಶಿಷ್ಯರಾಗಿದ್ದವರು ಇಂದು ಕೆಪಿಸಿಸಿ ಅಧ್ಯಕ್ಷ. ಕಾಂಗ್ರೆಸ್ ಇತಿಹಾಸವೇ ಹೀಗಿರಬೇಕಾದರೆ ಬೀದಿ ಹೊಡೆದಾಟಗಳು ಪಕ್ಷಕ್ಕೆ ಸಾಮಾನ್ಯ. ಆದರೆ, ನಾಡಿನ ಜನರಿಗೆ ಇದನ್ನು ಸಹಿಸಿಕೊಳ್ಳುವ ಕರ್ಮ ಏಕೆ? ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ ಒಳಗಿನ ಬೇಗುದಿ, ರೌಡಿಸಂ ವರ್ತನೆಯ ಫಲಶೃತಿಯೇ ಹೊಸಕೋಟೆ, ಹಾಸನ, ತುಮಕೂರು ಗ್ರಾಮಾಂತರ ಪ್ರದೇಶಗಳ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮಲ್ಲೇ ರಂಪಾಟ. ತಮ್ಮ ಕಾಯಕರ್ತರನ್ನು ತಹಬಂದಿಗೆ ತರಲು ಹೆಣಗಾಡುತ್ತಿರುವ ಈ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯ ಚುಕ್ಕಾಣಿ ಹಿಡಿದರೆ ಗತಿ ಏನು ಎಂಬುದನ್ನು ಜನತೆ ಯೋಚಿಸಬೇಕು ಎಂದು ಬಿಜೆಪಿ ತಿಳಿಸಿದೆ.

ಅಧಿಕಾರ ದಾಹ ತೀರಿಸಿಕೊಳ್ಳಲು ರೌಡಿಸಂಗೂ ಇಳಿಯುವ ಕಾಂಗ್ರೆಸ್ ನಾಯಕರ ರಕ್ಕಸ ಗುಣಗಳು ಪಕ್ಷದ ಕಾರ್ಯಕರ್ತರಲ್ಲೂ ಈಗ ಕಾಣುತ್ತಿರುವುದಕ್ಕೆ ಆಶ್ಚರ್ಯ ಪಡಬೇಕಿಲ್ಲ. ಯಥಾ ರಾಜ ತಥಾ ಪ್ರಜಾ. ಸಮಾಜದ ಅಶಾಂತಿಗೆ, ಸಮಾಜ ಘಾತುಕ ಶಕ್ತಿಗಳಿಗೆ ಪ್ರೇರಕರಾಗಿರುವ ಇಂಥವರಿಂದ ಎಂಥ ಆಡಳಿತ ನಿರೀಕ್ಷಿಸಬಹುದು, ನೀವೇ ಯೋಚಿಸಿ? ಎಂದು ಬಿಜೆಪಿ ತಿಳಿಸಿದೆ.

Similar News