ಅಕಾಡೆಮಿ ವೆಬ್‍ಸೈಟ್‍ನಲ್ಲಿ ಸಾಹಿತಿಗಳ ಮಾಹಿತಿ ತಿದ್ದುಪಡಿ, ಸೇರ್ಪಡೆಗೆ ಅವಕಾಶ
Update: 2022-12-10 17:47 GMT
ಬೆಂಗಳೂರು, ಡಿ.10: ಸಾಹಿತಿಗಳ ಸಂಪೂರ್ಣ ಮಾಹಿತಿಯನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್‍ನಲ್ಲಿ ತರಲಾಗಿದ್ದ ಯೋಜನೆಯಾದ ‘ಬಂಗಾರದ ಎಲೆಗಳು ಸಾಹಿತಿ-ಮಾಹಿತಿ ಕೋಶ’ದಲ್ಲಿ ಹೊಸದಾಗಿ ಸಾಹಿತಿಗಳ ಸೇರ್ಪಡೆ ಹಾಗೂ ತಿದ್ದುಪಡಿಗಳಿಗೆ ಅವಕಾಶವನ್ನು ಕಲ್ಪಸಲಾಗಿದೆ ಎಂದು ಅಕಾಡೆಮಿ ತಿಳಿಸಿದೆ.
ಅಕ್ಟೋಬರ್ 14ರಂದು ಅಕಾಡೆಮಿ ವೆಬ್‍ಸೈಟ್‍ನಲ್ಲಿ ಲೋಕಾರ್ಪಣೆಗೊಂಡ ‘ಬಂಗಾರದ ಎಲೆಗಳು ಸಾಹಿತಿ-ಮಾಹಿತಿ ಕೋಶ’ದಲ್ಲಿ ಈಗಾಗಲೇ 7200ಕ್ಕೂ ಹೆಚ್ಚು ಸಾಹಿತಿಗಳ ಮಾಹಿತಿ ಲಭ್ಯವಿದ್ದು, ಈ ಕೋಶವನ್ನು ಪ್ರತಿ ವರ್ಷ ಪರಿಷ್ಕರಣೆಗೊಳಿಸಲಾಗುತ್ತದೆ. ಆದ್ದರಿಂದ ಯಾವುದಾದರೂ ತಿದ್ದುಪಡಿಗಳಿದ್ದಲ್ಲಿ, ಅಥವಾ ಹೊಸದಾಗಿ ಸೇರಿಸಬೇಕಾದ ಸಾಹಿತಿಗಳ ಹೆಸರುಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಅಕಾಡೆಮಿಗೆ ಕಳಿಸಿಕೊಡಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.