ಮೂಡಿಗೆರೆ: ಉಪಟಳ ನೀಡುತ್ತಿದ್ದ ಕಾಡಾನೆ ಕೊನೆಗೂ ಸೆರೆ

3 ಕಾಡಾನೆಗಳ ಸೆರೆಗೆ ಆದೇಶ ನೀಡಿದ್ದ ಸರಕಾರ

Update: 2022-12-11 16:43 GMT

ಚಿಕ್ಕಮಗಳೂರು, ಡಿ.11: ಮೂಡಿಗೆರೆ (Mudigere) ತಾಲೂಕು ಸುತ್ತಮುತ್ತ ಉಪಟಳ ನೀಡುತ್ತಿದ್ದ ಕಾಡಾನೆ 'ಭೈರ'ನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಮೂಡಿಗೆರೆ ತಾಲ್ಲೂಕು ಊರುಬಗೆ ಸೇರಿದಂತೆ ಇತರೆಡೆಗಳಲ್ಲಿ ಭೈರ ಬಾರೀ ಉಪಟಳ ನೀಡುತ್ತಿದ್ದ, ಕೆಲವು ತಿಂಗಳ ಹಿಂದ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದ ಕೂಲಿ ಕಾರ್ಮಿಕನನ್ನು ತುಳಿದು ಸಾಯಿಸಿದ ಭೈರ ಕಾಡಾನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಮೇಲೆ ಬಾರೀ ಒತ್ತಡ ತಂಡ ಹಿನ್ನಲೆಯಲ್ಲಿ ಭೈರನನ್ನು ಸೆರೆ ಹಿಡಿ ಯುವಂತೆ ಸರ್ಕಾರ ಆದೇಶಿತ್ತು.

ಭೈರನನ್ನು ಸೆರೆ ಹಿಡಿಯಲು ಈ ಹಿಂದೆ ನಾಗರಹೊಳೆಯಿಂದ ಸಾಕಾನೆಗಳನ್ನು ಕರೆಸಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಭೈರ ಯಾರ ಕಣ್ಣಿಗು ಬೀಳದ ಹಿನ್ನಲೆ ಮತ್ತು ಸಾಕಾನೆ ಅಭಿಮನ್ಯವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. 

ಇತ್ತೀಚೆಗೆ ಕುಂದೂರು ಹುಲ್ಲುಮನೆ ಗ್ರಾಮದ ಮಹಿಳೆ ಶೋಭಾ ಅವರನ್ನು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಮೃತದೇಹ ವೀಕ್ಷಣೆಗೆ ತೆರಳಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮೇಲೆ ಆಕ್ರೋಶಗೊಂಡ ಗ್ರಾಮಸ್ಥರು ಹಲ್ಲೆ ನಡೆಸಿದ್ದರು. ಈ ಘಟನೆ ಬಳಿಕದ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾಡಾನೆಗಳನ್ನು ಸೆರೆ ಹಿಡಿ ಯುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಿತ್ತು. ಆನೆ ಸೆರೆ ಟಾಸ್ರ್ಕ್ ಪೋಸ್ ತಂಡವನ್ನು ರಚಿಸಿ ಅದರಂತೆ ಮೂಡಿಗೆರೆಯಲ್ಲಿ ಟಾಸ್ರ್ಕ್‍ಪೋಸ್ ತೆರೆಯಲಾಗಿದೆ.

ಸರ್ಕಾರದ ಆದೇಶದಂತೆ ನಾಗರಹೊಳೆಯಿಂದ ಸಾಕಾನೆಗಳ ತಂಡವನ್ನು ಕರೆಸಿಕೊಂಡಿದ್ದು, ಕೆಲವು ದಿನಗಳಿಂದ ಮೂಡಿಗೆರೆ ಭಾಗದಲ್ಲಿ ಈ ಆನೆ ಸೆರೆ ತಂಡ ಕಾರ್ಯಾನಿರ್ವಹಿಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಕಾಡಾನೆ ಯನ್ನು ಸೆರೆ ಹಿಡಿದಿದ್ದ ಈ ತಂಡ ಭಾನುವಾರ ಭೈರ ಕಾಡಾನೆಯನ್ನು ಸೆರೆಹಿಡಿಯಲಾಗಿದೆ. 

ರವಿವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆಗಿಳಿಸಿದ ಕಾಡಾನೆ ಸೆರೆ ತಂಡಕ್ಕೆ ಮೂಡಿಗೆರೆ ತಾಲ್ಲೂಕು ಊರುಬಗೆ ಗ್ರಾಮದ ಸಮೀಪದಲ್ಲಿ ಬೈರ ಕಾಣಿಸಿಕೊಂಡಿದ್ದಾನೆ. ಭೈರನ ಮಾಹಿತಿ ಸಿಗುತ್ತಿದ್ದಂತೆ ಎಚ್ಚೇತ್ತುಕೊಂಡ ಸಿಬ್ಬಂದಿಗಳು ಕಾರ್ಯಾಚರಣೆ ಮುಂದೂವರೆಸಿದ್ದು, ಅರವಳಿಗೆ ತಜ್ಞರು ಅರವಳಿಕೆ ನೀಡಿ ಭೈರನನ್ನು ಸೆರೆ ಹಿಡಿದಿದ್ದಾರೆ.

ಮಲೆನಾಡು ಭಾಗದಲ್ಲಿ ಅನೇಕ ತಿಂಗಳಿಂದ ಉಪಟಳ ನೀಡುತ್ತಿದ್ದ ಹಾಗೂ ನರಹಂತಕ ಎಂದೇ ಕರೆಯಲಾಗುತ್ತಿದ್ದ ಕಾಡಾನೆ ಭೈರ ಸೆರೆ ಹಿಡಿದಿದ್ದು, ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.

Similar News