ಮೀನುಗಾರಿಕೆಯನ್ನು ಕೃಷಿ ಇಲಾಖೆಯಲ್ಲಿ ವಿಲೀನ ಮಾಡಲು ಒತ್ತಾಯ

Update: 2022-12-12 12:55 GMT

ಬೆಂಗಳೂರು, ಡಿ.12: ಮೀನುಗಾರರಿಗೆ ಮೀನುಗಾರಿಕೆ ಇಲಾಖೆಯಿಂದ ಸಮರ್ಪಕ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ಮೀನುಗಾರಿಕೆಯ ಅಭಿವೃದ್ಧಿಯ ದೃಷ್ಟಿಯಿಂದ ಮೀನುಗಾರಿಕೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಬೇಕು ಎಂದು ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಒತ್ತಾಯಿಸಿದೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಜಯ ಸಿ.ಕೊಟ್ಯಾನ್, ಕೇಂದ್ರ ಸರಕಾರವು ಮೀನುಗಾರರ ಅಭಿವೃದ್ಧಿಯ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿದರೂ ಮೀನುಗಾರರಿಗೆ ಈ ತನಕವೂ ಸಿಕ್ಕಿಲ್ಲ. ರಾಜ್ಯದ ಎಲ್ಲ ಬಂದರಿನಲ್ಲಿ ಹೂಳು ತುಂಬಿದೆ. ಇದರಿಂದ ದೋಣಿಗಳು ಚಲಿಸಲು ಅನಾನೂಕುಲವಾಗಿ, ಮೀನುಗಾರ ಕಾರ್ಮಿಕರ ಮರಣ ಸಂಭವಿಸುತ್ತಿದೆ ಎಂದು ಹೇಳಿದರು.

ರಾಜ್ಯದ ಮೀನುಗಾರಿಕೆಯ ಅಭಿವೃದ್ಧಿಯ ದೃಷ್ಟಿಯಿಂದ ತೆರಿಗೆ ರಿಯಾಯಿತಿ ಡೀಸಲ್ ಅನ್ನು ದಿನಕ್ಕೆ 500ಲೀ.ಗೆ ಏರಿಸಬೇಕು. ಮೀನುಗಾರಿಕೆಯ ತುರ್ತು ಸಂದರ್ಭದಲ್ಲಿ ತುರ್ತು ಅವಘಡ ಸುರಕ್ಷಾ ಬೋಟು ಮತ್ತು ಸೀ ಅಂಬ್ಯುಲೆನ್ಸ್ ಗಳನ್ನು ಒದಗಿಸಬೇಕು. ಹಾಗೆಯೇ ಮೂಲ ಮೀನುಗಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು. ಈ ವೇಳೆ ಮೋಹನ್ ಬೆಂಗ್ರೆ, ಕಿಶೋರ್ ಡಿ. ಸುವರ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

Similar News