ರಾಜ್ಯದಲ್ಲಿ ಇನ್ನೆರಡು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು, ಡಿ.12: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮುಂದಿನ ಇನ್ನೆರಡು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ರಾಜ್ಯದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ: ಮಂಗಳವಾರ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದ್ದು, ಗರಿಷ್ಠ ಉಷ್ಣಾಂಶ 24 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿದೆ.
ಮೀನುಗಾರರಿಗೆ ಎಚ್ಚರಿಕೆ: ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40-45 ಕಿ.ಮೀ ಇರಲಿದ್ದು, 55 ಕಿ.ಮೀ.ವರೆಗೂ ತಲುಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಡಿ.13ರಂದು ಮೀನುಗಾರರಿಗೆ ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.