ಮಾಂಡೌಸ್ ಚಂಡಮಾರುತದಿಂದ ಮಳೆ, ಶೀತ ಗಾಳಿ; ರೋಗಗಳಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

Update: 2022-12-12 17:41 GMT

ಬೆಂಗಳೂರು, ಡಿ. 12: ಮಾಂಡೋಸ್ ಚಂಡಮಾರುತದಿಂದ ಮಳೆ, ಶೀತ ಗಾಳಿ ಹಿನ್ನಲೆಯಲ್ಲಿ ಮಕ್ಕಳು ( ನವಜಾತ ಶಿಶುಗಳು), ಗರ್ಭಿಣಿಯರು, ವೃದ್ದರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಸಂಬಂಧ ಇಲಾಖೆ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಯಾವಾಗಲೂ ಬೆಚ್ಚಗಿನ ನೀರು / ಸೂಪ್‌ಗಳನ್ನು ಸೇವಿಸುವುದು. ಸುಲಭವಾಗಿ ಜೀರ್ಣವಾಗುವ ಹಾಗೂ ತಾಜಾ ಆಹಾರ ಪದಾರ್ಥಗಳನ್ನೇ ಸೇವಿಸಬೇಕು. ಯಾವಾಗಲೂ ಸ್ವೆಟರ್, ಸಾಕ್ಸ್ ಹಾಗೂ ಕೈಗವಸುಗಳನ್ನು ಧರಿಸುವುದು ಒಳಗಿರುವಾಗಲೂ ಬೆಚ್ಚಗಿರುವುದು ಉತ್ತಮ. 

ಸ್ನಾನಕ್ಕೆ ಬಿಸಿ ನೀರು, ಬೆಚ್ಚಗಿನ ನೀರನ್ನು ಉಪಯೋಗಿಸುವುದು, ಅನಗತ್ಯವಾಗಿ ಹೊರಗೆ ಸಂಚಾರ ತಪ್ಪಿಸಿ, ಕಿವಿಗಳನ್ನು ಹತ್ತಿಯಿಂದ ಮುಚ್ಚಿಕೊಳ್ಳಿ ಅಥವಾ ಸ್ಕಾರ್ಫ್​ ಬಳಸಿ. ಹೊರಗೆ ಹೋಗುವವರು ಮಾಸ್ಕ್ ಧರಿಸಿ. ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಕೆಮ್ಮುವಾಗ ಹಾಗೂ ಸೀನುವಾಗ ಕರವಸತ್ರ ಬಳಸಿ. ಕೈಗಳನ್ನು ಆಗಾಗ್ಗೆ ಸೋಪು ಹಾಗೂ ನೀರು ಬಳಸಿ ತೊಳೆಯಿರಿ ಎಂದು ಸಲಹೆ ನೀಡಲಾಗಿದೆ.

ಮಾಡಬಾರದ್ದು (Don'ts ):  ಈ ವಾತಾವರಣದಲ್ಲಿ ಯಾರೂ ತಂಪು ಪಾನೀಯ ಹಾಗೂ ಐಸ್ ಕ್ರೀಂ ಸೇವಿಸಬಾರದು, ಫ್ರಿಡ್ಜ್​ನ ಅಥವಾ ತಣ್ಣಗಿನ ನೀರನ್ನು ಕುಡಿಯಬಾರದು. ಮಳೆಯಲ್ಲಿ ನೆನೆಯುವುದು, ತಣ್ಣನೆ ಹಾಗೂ ಶೀತಗಾಳಿಗೆ ಮೈ ಒಡ್ಡುವುದನ್ನು ತಪ್ಪಿಸಬೇಕು. ಹೊರಾಂಗಣ ಪ್ರವಾಸ ನಿರ್ಭಂದಿಸಬೇಕು. ಮಸಾಲಾಯುಕ್ತ ಪದಾರ್ಥಗಳು, ಜಂಕ್ ಫುಡ್‌ಗಳನ್ನು ಸೇವಿಸಬೇಡಿ ಎಂದು ಎಂದು ಮಾರ್ಗಸೂಚಿಯಲ್ಲಿ ಆರೋಗ್ಯ ಇಲಾಖೆ ತಿಳಿಸಿದೆ.

ಈ ಕುರಿತು ಜಿಲ್ಲಾ ಮತ್ತು ಬಿಬಿಎಂಪಿ ಆರೋಗ್ಯ ಪ್ರಾಧಿಕಾರಗಳು, ತಮ್ಮ ವ್ಯಾಪ್ತಿಯಲ್ಲಿ ಜಾಗೃತಿಯನ್ನು ಮೂಡಿಸುವುದರ ಮೂಲಕ ಸದರಿ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಆರೋಗ್ಯ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

Similar News