ಕಲಬುರಗಿ | ಮೆದುಳು ಜ್ವರಕ್ಕೆ ಲಸಿಕೆ ಪಡೆದಿದ್ದ ವಿದ್ಯಾರ್ಥಿ ಜ್ವರದಿಂದ ಮೃತ್ಯು; ಪೋಷಕರ ಆರೋಪ

ವ್ಯಾಕ್ಸಿನೇಷನ್‌ ಕಾರಣ ಎಂಬುದು ವೈದ್ಯಕೀಯ ವರದಿಯಲ್ಲಿ ಕಂಡುಬಂದಿಲ್ಲ ಎಂದ ವೈದ್ಯಾಧಿಕಾರಿ

Update: 2022-12-13 14:59 GMT

ಕಲಬುರಗಿ, ಡಿ.13: ಶಾಲೆಯಲ್ಲಿ ಮೆದುಳು ಜ್ವರ ತಡೆಯಲು ನೀಡಲಾಗುತ್ತಿದ್ದ ವ್ಯಾಕ್ಸಿನ್​ ಪಡೆದಿದ್ದ ವಿದ್ಯಾರ್ಥಿಯೋರ್ವ ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. 

ಕಲಬುರಗಿಯ ಹೀರಾಪೂರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕ ಆಕಾಶ್ ಮೃತ ಬಾಲಕ ಎಂದು ತಿಳಿದು ಬಂದಿದೆ.  

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ:  

ಮೃತ ಬಾಲಕನ ಕುಟುಂಬಕ್ಕೆ ಒಂದು ಕೋಟಿ ರೂ.ಗಳ ಪರಿಹಾರ ಕೊಡುವಂತೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಸಂಬಂಧಪಟ್ಟ ಸಿಬ್ಬಂದಿಗಳ ಅಮಾನತ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಸೋಮವಾರ ರಿಪಬ್ಲಿಕನ್ ಯೂತ್ ಫೆಡರೇಷನ್ ನೇತೃತ್ವದಲ್ಲಿ ಬಾಲಕನ ಸಂಬಂಧಿಕರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, 'ನಗರದ ಹೀರಾಪೂರದಲ್ಲಿ ಬಸವೇಶ್ವರ್ ಪ್ರಾಥಮಿಕ ಶಾಲೆಯ 4ನೇ ತರಗತಿಯ ಆಕಾಶ್ ತಂದೆ ಚಂದ್ರಕಾಂತ್ (10 ವರ್ಷ) ಎಂಬ ಬಾಲಕನಿಗೆ ಶಾಲೆಯಲ್ಲಿ ಮೆದುಳು ಜ್ವರದ ಇಂಜೆಕ್ಷನ್ ನೀಡಲಾಗಿದ್ದು, ಅದೇ ದಿನ ಮಗುವಿಗೆ ಜ್ವರ ಬಂದಿದೆ. ಜ್ವರ ಕಡಿಮೆಯಾಗದೇ ನವೆಂಬರ್ 9ರಂದು ಸಂಗಮೇಶ್ವರ್ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವಿಪರೀತ ಜ್ವರದಿಂದ ಬಾಲಕ ಮೃತಪಟ್ಟಿದ್ದಾನೆ. ಇದಕ್ಕೆ ನೇರವಾಗಿ ಆರೋಗ್ಯ ಇಲಾಖೆಯೇ ಹೊಣೆಯಾಗಿದೆ' ಎಂದು ದೂರಿದರು.

ಜಿಲ್ಲಾ ಸಂಚಾಲಕ ಹನುಮಂತ್ ಇಟಗಿ ಮತ್ತು ಗೌರವ ಸಂಚಾಲಕ ಸಂತೋಷ್ ಮೇಲ್ಮನಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

----------------------------------

'ರಾಜ್ಯದ 20 ಜಿಲ್ಲೆಯ ಈವರೆಗೆ 3 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಿದ್ದೇವೆ. ಇದುವರೆಗೆ ಯಾವುದೇ ರೀತಿ ಅಡ್ಡ ಪರಿಣಾಮ ಬೀರಿಲ್ಲ. ನಮ್ಮಲ್ಲಿ  ಇಂತಹ ಆರೋಪ ಕೇಳಿಬಂದಿದ್ದು, ಮರಣಕ್ಕೆ ವ್ಯಾಕ್ಸಿನೇಷನ್‌ ಕಾರಣ ಎಂಬುದಕ್ಕೆ ವೈದ್ಯಕೀಯ ವರದಿಯಲ್ಲಿ ಕಂಡುಬಂದಿಲ್ಲ. ಆದರೂ ಸಹ ನಾವು ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ'

- ರಾಜಶೇಖರ, ಜಿಲ್ಲಾ ವೈದ್ಯಾಧಿಕಾರಿಗಳು, ಕಲಬುರಗಿ

Similar News