'ಈ ಜಾಗದಲ್ಲಿ ಕೂತು ತೀರ್ಮಾನ ಮಾಡೋದು ಹಿಂಸೆಯಾಗಿದೆ ದೇವೇಗೌಡ್ರೆ...': ಹಾಲಿ-ಮಾಜಿ ಪ್ರಧಾನಿಗಳ ಭೇಟಿ

Update: 2022-12-13 17:37 GMT

ಹೊಸದಿಲ್ಲಿ, ಡಿ.13: ಕಾವೇರಿ, ಕೃಷ್ಣಾ ಸೇರಿದಂತೆ ನೀರಾವರಿ ಯೋಜನೆಗಳಲ್ಲಿ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿಗೆ (narendramodi) ವಿವರಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಮಂಗಳವಾರ ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯನ್ನು ಸಂಸತ್‍ನಲ್ಲಿ ಭೇಟಿ ಮಾಡಿ ನಮ್ಮ ರಾಜ್ಯದ ನೀರಾವರಿ ಯೋಜನೆಗಳ ವಿಚಾರವನ್ನ ಪ್ರಸ್ತಾಪ ಮಾಡಿದ್ದೇನೆ. ಅಲ್ಲದೆ, ರಾಜ್ಯದ ಯೋಜನೆಗಳಿಗೆ ಆಗಿರುವ ಅನ್ಯಾಯವನ್ನು ವಿವರಿಸಿದ್ದೇನೆ ಎಂದರು.

‘ಈ ಜಾಗದಲ್ಲಿ ಕೂತು ತೀರ್ಮಾನ ಮಾಡೋದು ಹಿಂಸೆಯಾಗಿದೆ ದೇವೇಗೌಡ್ರೆ’, ನದಿ ನೀರಿನ ವ್ಯಾಜ್ಯಗಳ ತೀರ್ಮಾನ ಕಷ್ಟವಾಗಿದೆ. ನಮ್ಮದೆ ಸರಕಾರ ಇದ್ದರೂ ನರ್ಮದಾ ನದಿ ನೀರಿನ  ತೀರ್ಮಾನ ಕಷ್ಟವಾಗಿದೆ. ನಮ್ಮವರೆ ನಮಗೆ ವಿರೋಧ ಮಾಡುತ್ತಿದ್ದಾರೆ. ಎಲ್ಲ ನದಿಗಳದ್ದು ವಿವಾದಗಳಿವೆ. ಯಾವ ನಿರ್ಧಾರ ತೆಗೆದುಕೊಳ್ಳುವುದು? ಎಂದು ಪ್ರಧಾನಿ ಮೋದಿ ಹೇಳಿದರು ಎಂದು ದೇವೇಗೌಡ ತಿಳಿಸಿದರು.

ಕುಂಚಿಟಿಗ ಸಮುದಾಯಕ್ಕೆ ಅನ್ಯಾಯ ಆಗಿರುವ ಬಗ್ಗೆಯೂ ವಿವರವಾಗಿ ಹೇಳಿದ್ದೇನೆ. ಕುಂಚಿಟಿಗ ಸಮಯದಾಯ ಕರ್ನಾಟಕದಲ್ಲಿ 6/7 ತಾಲೂಕುಗಳಲ್ಲಿದೆ. ಕುಂಚಿಟಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಆ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಕೇಂದ್ರ  ಸರಕಾರವು ಈ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲೇಬೇಕು ಎಂದು ಪ್ರಧಾನಿಗೆ ಒತ್ತಾಯ ಪೂರ್ವಕ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.

ಹಾಸನ ವಿಮಾನ ನಿಲ್ದಾಣದ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಇನ್ನೂ ವಿಮಾನ ನಿಲ್ದಾಣದ ಕೆಲಸ ಪೂರ್ಣವಾಗಿಲ್ಲ. ಅಲ್ಲಿನ ಸಮಸ್ಯೆಗಳ ಬಗ್ಗೆ ನೀವೇ ತೀರ್ಮಾನ ಮಾಡಿ ಎಂದು ಪ್ರಧಾನಿಗೆ ಕೇಳಿಕೊಂಡಿದ್ದೇನೆ ಎಂದು ದೇವೇಗೌಡ ತಿಳಿಸಿದರು.

ಇದನ್ನೂ ಓದಿ: ಕುತೂಹಲ ಕೆರಳಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತ ಶಾಸಕರ ಸಭೆ

Similar News