ಕೊತ್ತಂಬರಿ ಸೊಪ್ಪಿನ ಬೆಳೆ ಜೊತೆ ಗಾಂಜಾ ಗಿಡ ಬೆಳೆದ ಆರೋಪಿಯ ಬಂಧನ
ಹನೂರು, ಡಿ.15: ಚಿಕ್ಕಮಾಲಾಪುರ ಗ್ರಾಮದಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯ ಜೊತೆ ಅಕ್ರಮವಾಗಿ ಗಾಂಜಾ(Ganja) ಗಿಡವನ್ನು ಬೆಳದಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಅಬಕಾರಿ ಪೋಲಿಸರು ಬಂಧಿಸಿದ್ದಾರೆ.
ಹನುಮೇಗೌಡ(40) ಬಂಧಿತ ಆರೋಪಿ. ಚಿಕ್ಕಮಾಲಾಪುರ ಗ್ರಾಮದಲ್ಲಿರುವ ಸರೋಜಮ್ಮ ಕೋಂ ಲೇಟ್ ಬಸವಣ್ಣ ಎಂಬವರಿಗೆ ಸೇರಿದ ಜಮೀನಿನಲ್ಲಿ ಈತ ಕೊತ್ತಂಬರಿ ಸೊಪ್ಪು ಬೆಳೆಯ ಜೊತೆ ಅಕ್ರಮವಾಗಿ ಗಾಂಜಾ ಗಿಡವನ್ನು ಸಾಗುವಳಿ ಮಾಡಿದ್ದಾಗಿ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಅಬಕಾರಿ ಪೊಲೀಸ್ ಇನ್ ಸ್ಪೆಕ್ಟರ್ ಸುನೀಲ್ ನೇತೃತ್ವದ ತಂಡ ದಾಳಿ ನಡೆಸಿದಾಗ ಹನುಮೇಗೌಡನಿಗೆ ಸೇರಿದ ಜಮೀನಿನಲ್ಲಿ 1.3 ಮೀಟರ್ (4.3 ಅಡಿ ) ಎತ್ತರದ ಒಂದು ಗಾಂಜಾ ಗಿಡ (348 ಗ್ರಾಂ ತೂಕ)ವನ್ನು ಅಕ್ರಮವಾಗಿ ಬೆಳದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಸಿದ್ದಯ್ಯ, ಅಬಕಾರಿ ಪೇದೆಗಳಾದ ಸಿದ್ದರಾಜು ಬಿ., ರಮೇಶ ಎಂ. ಹಾಗೂ ಪ್ರದೀಪ್‌ಕುಮಾರ್ ಕೆ. ಭಾಗವಹಿಸಿದ್ದರು.