ಅಲ್ಪಸಂಖ್ಯಾತ ನಾಯಕರಿಂದ 20ಕ್ಕೂ ಹೆಚ್ಚು ಟಿಕೆಟ್‍ಗೆ ಬೇಡಿಕೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರತಿಕ್ರಿಯೆ ಏನು?

Update: 2022-12-15 14:56 GMT

ಬೆಂಗಳೂರು, ಡಿ.15: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚು ಟಿಕೆಟ್ ನೀಡುವಂತೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಗುರುವಾರ ಬೆಂಗಳೂರು ಪ್ರೆಸ್‍ಕ್ಲಬ್ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,ಅಲ್ಪಸಂಖ್ಯಾತರಿಂದ ಹೆಚ್ಚಿನ ಅರ್ಜಿ ಬಂದಿರುವುದು ತಪ್ಪಿಲ್ಲ. ಅವರು ಟಿಕೆಟ್ ಕೇಳುತ್ತಿರುವುದರಲ್ಲೂ ತಪ್ಪಿಲ್ಲ, ಪ್ರತಿ ಕ್ಷೇತ್ರ ಬಹಳ ಮುಖ್ಯ ಎಂದರು.

ಕಾಂಗ್ರೆಸ್ ಪಕ್ಷವೂ ಆ ಸಮುದಾಯಕ್ಕೆ ಶಕ್ತಿ ತುಂಬಲು ಪ್ರಯತ್ನಿಸುತ್ತದೆ. ವಿಧಾನಪರಿಷತ್‍ನಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದಾಗ ಅವರ ಧ್ವನಿ ಇರಬೇಕು ಎಂಬ ಕಾರಣಕ್ಕೆ ಎರಡು ಸ್ಥಾನವನ್ನು ಅವರಿಗೆ ನೀಡಲಾಗಿದೆ. ಯಾವುದೇ ಸಮುದಾಯದವರು ಕೇಳಿದರೂ ತಪ್ಪಿಲ್ಲ. ಮುಸಲ್ಮಾನರಿಗೆ ಟಿಕೆಟ್ ನೀಡಬೇಕು ಎಂದು ಅಂದುಕೊಂಡಿರುವ ಕ್ಷೇತ್ರಗಳಲ್ಲಿ ಅರ್ಜಿಯನ್ನೆ ಹಾಕಿಲ್ಲ. ನಾವೇ ಕೆಲವನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.  

ಮಹಾಜನ್ ಸಮಿತಿ ವರದಿ ವಿಚಾರವಾಗಿ ಕಾಂಗ್ರೆಸ್ ನಿಲುವು ಪ್ರಶ್ನೆಗೆ ಉತ್ತರಿಸಿದ ಅವರು,ಗಡಿ ವಿಚಾರ ಕೋರ್ಟ್‍ನಲ್ಲಿ ಚರ್ಚೆ ಆಗುತ್ತಿದೆ. ನ್ಯಾಯಾಲಯದಲ್ಲಿ ವಿಚಾರ ನಡೆಯುತ್ತಿರುವಾಗ ಈ ವಿಚಾರವಾಗಿ ಬಾಯಿ ಹಾಕಿಕೊಂಡು ವಿವಾದ ಏಕೆ ಸೃಷ್ಟಿಸಬೇಕು?. ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಸರಕಾರ, ಮಹಾರಾಷ್ಟ್ರ ಸರಕಾರ ಈ ವಿಚಾರ ಪ್ರಸ್ತಾಪ ಮಾಡಿದ್ದು ಏಕೆ? ನಾವು ತಟಸ್ಥ ಸ್ಥಿತಿಯನ್ನು ಪಾಲಿಸುತ್ತೇವೆ. ನ್ಯಾಯಾಲಯದಲ್ಲಿರುವ ವಿಚಾರ ಈಗ ಚರ್ಚೆ ಬೇಡ ಎಂದರು.

ಪಕ್ಷ ಬಿಟ್ಟು ಹೋದವರಲ್ಲಿ ನಿಮ್ಮ ಸಂಪರ್ಕದಲ್ಲಿ ಯಾರಾದರೂ ಇದ್ದಾರಾ ಎಂದು ಕೇಳಿದ ಪ್ರಶ್ನೆಗೆ, ಆಂತರಿಕವಾದ ಗುಟ್ಟಿನ ವಿಚಾರವನ್ನು ಬಹಿರಂಗ ನೀಡುವುದಿಲ್ಲ. ಅಶೋಕ್ ಅವರು ಸಂಕ್ರಾಂತಿ ಬಗ್ಗೆ ಮಾತನಾಡುತ್ತಿದ್ದು, ಸಂಕ್ರಾಂತಿ ಬರಲಿ ಗೊತ್ತಾಗುತ್ತದೆ ಎಂದು ತಿಳಿಸಿದರು.

ನಾವು ಸತತವಾಗಿ ಜನರ ಬಳಿ ಹೋಗುತ್ತಿದ್ದೇವೆ. ಕೆಲವರು ಈಗ ಯಾತ್ರೆಗಳನ್ನು ಮಾಡುತ್ತಿದ್ದಾರೆ, ಅದಕ್ಕೆ ನಮ್ಮ ತಕರಾರಿಲ್ಲ. ಯಾರು ಏದರೂ ಮಾಡಲಿ, ಯಾವುದೇ ಆಶ್ವಾಸನೆ ನೀಡಲಿ. ಆದರೆ ನಾವು ಕೊಟ್ಟ ಆಶ್ವಾಸನೆಯನ್ನು ಬಹುತೇಕ ಈಡೇರಿಸುತ್ತೇವೆ ಎಂದ ಅವರು, ಎಚ್.ಡಿ.ಕುಮಾರಸ್ವಾಮಿ ಜೊತೆ ಎಷ್ಟೊಂದು ಕುಸ್ತಿ ಮಾಡಲಿ. ಆಗ ಏನೋ ಹುಡುಗ ಇದ್ದೋ ಕುಸ್ತಿ ಮಾಡಿದ್ದೇವು. ಈಗ  ಸೈದ್ಧಾಂತಿಕವಾಗಿ ಕುಸ್ತಿ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ, ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿದಂತೆ ಪ್ರಮುಖರಿದ್ದರು.

ಕೊತ್ವಾಲ್ ಎನ್ನಲು ದಾಖಲೆ ಏನಿದೆ?: ‘ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದ್ದಾರೆ. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನಾನು ಕೊತ್ವಾಲ್ ರಾಮಚಂದ್ರ ಶಿಷ್ಯ ಎಂಬುದಕ್ಕೆ ಏನು ದಾಖಲೆ ಏನಿದೆ?. ನಾನು 1980ರಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ವಿದ್ಯಾರ್ಥಿ ಕಾಲದಿಂದಲೂ ರಾಜಕೀಯದಲ್ಲಿ ಇದ್ದೇನೆ. 1985ರಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದೆ. ನನಗೆ ನನ್ನದೇ ಆದ ಇತಿಹಾಸವಿದೆ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Full View

Similar News