ಅಕ್ರಮವಾಗಿ ಜಮೀನು ಮಂಜೂರಾತಿಗೆ ಅನುಮೋದನೆ ಆರೋಪ; ಗೋಣಿಬೀಡು ಕಂದಾಯ ನಿರೀಕ್ಷಕನ ಬಂಧನ
ಚಿಕ್ಕಮಗಳೂರು, ಡಿ.15: ಸರಕಾರಿ ಜಮೀನು ಮಂಜೂರು ಮಾಡಲು ಅಕ್ರಮವಾಗಿ ಅನುಮೋದನೆ ನೀಡಿ ವಂಚಿಸಲು ಯತ್ನಿಸಿರುವ ಆರೋಪದ ಮೇರೆಗೆ ಗೋಣಿಬೀಡು ಕಂದಾಯ ನಿರೀಕ್ಷಕ ಲಕ್ಷ್ಮಣ್ ಎಂಬವರನ್ನು ಬಂಧಿಸಲಾಗಿದೆ.
ಗೋಣಿಬೀಡು ಹೋಬಳಿ ವ್ಯಾಪ್ತಿಯ ಹೊಸಪುರ ಗ್ರಾಮದ ಸ.ನಂ.73ರಲ್ಲಿ ಅಭಿಷೇಕ್ ಎಂಬವರಿಗೆ 25 ಗುಂಟೆ ಜಾಗವನ್ನು ಬೇರೆಯವರ ಸಾಗುವಳಿ ಚೀಟಿ ಸಂಖ್ಯೆ ಬಳಸಿ ಅಕ್ರಮವಾಗಿ ಮಂಜೂರು ಮಾಡಲು ಖಾತೆ ಮಾಡಲು ಕಂದಾಯ ನಿರೀಕ್ಷಕ ಲಕ್ಷ್ಮಣ್ ಅನುಮತಿ ನೀಡಿದ್ದರು ಎಂದು ಗಂಭೀರ ಆರೋಪ ಕೇಳಿ ಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಮೂಡಿಗೆರೆ ತಹಶೀಲ್ದಾರ್ ಅವರು ತನಿಖೆ ನಡೆಸಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಾಗರಾಜ್ ಅವರು ನೀಡಿದ ದೂರಿನ ಮೇರೆಗೆ ಕಚೇರಿಯಲ್ಲೇ ಆರ್ ಐ ಲಕ್ಷ್ಮಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಅಭಿಷೇಕ್ ಅವರಿಗೆ ಜಮೀನು ಮಂಜೂರು ಮಾಡುವ ಸಂಬಂಧ ಕಂದಾಯ ನಿರೀಕ್ಷಕ ಲಕ್ಷ್ಮಣ್ ಅವರು ಫಲಾನುಭವಿಯಿಂದ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಪಡೆಯದೇ, ಬಗರ್‍ಹುಕುಂ ಸಮಿತಿ ಮುಂದೆ ಅರ್ಜಿಯನ್ನೂ ಮಂಡಿಸದೇ, ಭೂಮಿ ಶಾಖೆಯಲ್ಲಿ ಎ.14/2020-21ರಂದು ಎಂಆರ್ ಸಂಖ್ಯೆಯನ್ನು ಅಕ್ರಮವಾಗಿ ನಮೂದಿಸಿ ಖಾತೆ ಮಾಡಲು ಅಕ್ರಮವಾಗಿ ಅನುಮೋದನೆ ನೀಡುವ ಮೂಲಕ ಸರಕಾರಕ್ಕೆ ವಂಚನೆ ಮಾಡಲು ಮುಂದಾಗಿದ್ದರೆಂದು ತಿಳಿದು ಬಂದಿದ್ದು, ಆರೋಪ ತನಿಖೆಯಲ್ಲಿ ಸಾಭೀತಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಾಗರಾಜ್ ಅವರ ದೂರಿನ ಮೇರೆಗೆ ಪೊಲೀಸರು ಆರ್‍ಐ ಲಕ್ಷ್ಮಣ್ ಅವರನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಆರ್‍ಐ ಲಕ್ಷ್ಮಣ್ ಅವರ ಮೇಲೆ ಈ ಹಿಂದೆ ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 6 ತಿಂಗಳುಗಳ ಹಿಂದೆ ಜಿಲ್ಲಾಧಿಕಾರಿ ಆರ್‍ಐ ಲಕ್ಷ್ಮಣ್ ಅವರನ್ನು ಅಮಾನತು ಮಾಡಿದ್ದರು. ನಂತರ ಹಿಂಬಡ್ತಿ ಮೂಲಕ ಕೊಪ್ಪ ತಾಲೂಕಿಗೆ ವರ್ಗಾವಣೆಗೊಂಡಿದ್ದ ಲಕ್ಷ್ಮಣ್ ಕೆಎಟಿಯಿಂದ ತಡೆಯಾಜ್ಞೆ ತಂದು ಮತ್ತೆ ಗೋಣಿಬೀಡು ಕಂದಾಯ ನಿರೀಕ್ಷಕರಾಗಿ ಸೇವೆಗೆ ಮರಳಿದ್ದರು.