ವಿಧಾನಸಭೆ ಚುನಾವಣೆ: ಉತ್ತರ- ದಕ್ಷಿಣ ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆಶಿ ಪ್ರತ್ಯೇಕ ಪ್ರವಾಸ

Update: 2022-12-15 18:31 GMT

ಬೆಂಗಳೂರು, ಡಿ.15: ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟಗಳನ್ನು ರೂಪಿಸಲಾಗಿದ್ದು, ಡಿ.30ರಂದು ಬಿಜಾಪುರದಲ್ಲಿ ಕೃಷ್ಣಾ ನದಿ ವಿಚಾರವಾಗಿ, ಜ.2ರಂದು ಹುಬ್ಬಳ್ಳಿಯಲ್ಲಿ ಮಹಾದಾಯಿ ವಿಚಾರದಲ್ಲಿ ಹೋರಾಟ ಮಾಡಲಿದ್ದೇವೆ. ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿ ರಾಜ್ಯದ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇವೆ. ಭಾರತ ಜೋಡೊ ಯಾತ್ರೆ ಸಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುವುದು. ಈ ಪ್ರವಾಸದ ನಂತರ 224 ಕ್ಷೇತ್ರಗಳಲ್ಲೂ ಪ್ರತ್ಯೇಕವಾಗಿ ಪ್ರವಾಸ ಮಾಡುತ್ತೇವೆ ಎಂದರು.

ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ದಕ್ಷಿಣ ಭಾಗದಲ್ಲಿ ನಾನು ಪ್ರವಾಸ ಮಾಡುತ್ತೇನೆ. ನಂತರ ಅವರು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಾರೆ. ನಾನು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೋಗುತ್ತೇನೆ. ಈ ಪ್ರವಾಸದಲ್ಲಿ ಕೇವಲ ನಾವಿಬ್ಬರೂ ಮಾತ್ರವಲ್ಲ, ನಮ್ಮ ಪಕ್ಷದ ಎಲ್ಲ ಹಿರಿಯ ನಾಯಕರು ಭಾಗವಹಿಸುತ್ತಾರೆ. ಈ ರೀತಿ 224 ಕ್ಷೇತ್ರಗಳಲ್ಲೂ ನಾವು ಪ್ರವಾಸ ಮಾಡುತ್ತೇವೆ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ನಾವು ನಮ್ಮ ನಾಯಕರ ಜತೆ ಚರ್ಚೆ ಮಾಡಿ ಪ್ರವಾಸದ ಪ್ರಯಾಣ ನಕ್ಷೆ ಅಂತಿಮಗೊಳಿಸಲಾಗುವುದು. ಮಾಧ್ಯಮಗಳು ನಾವು ಹೆಲಿಕಾಪ್ಟರ್ ಪ್ರವಾಸ ಮಾಡುವುದಾಗಿ ವರದಿ ಮಾಡಿವೆ. ನಮಗೆ ಇನ್ನು ಆ ಸಂದರ್ಭ ಬಂದಿಲ್ಲ. ಚುನಾವಣೆ ಸಮಯದಲ್ಲಿ ಕೆಲವೊಮ್ಮೆ ತುರ್ತಾಗಿ ಪ್ರವಾಸ ಮಾಡುವಾಗ ಹೆಲಿಕಾಪ್ಟರ್ ಬಳಸಲಾಗುವುದು. ಆದರೆ ಅದು ಹೆಲಿಕಾಪ್ಟರ್ ಯಾತ್ರೆ ಇಲ್ಲ. ನಾವು ಜನರಿಗಾಗಿ, ಜನರಿಗೋಸ್ಕರ, ಜನರ ಮಧ್ಯೆ, ಅವರ ಧ್ವನಿಯಾಗಿ ಅವರ ವಿಚಾರ ಅರಿತು ಚುನಾವಣೆಗೆ ತಯಾರಾಗುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

Full View

Similar News