"ಕುಕ್ಕರ್ ಬಾಂಬ್ ಸ್ಫೋಟ" ಘಟನೆಯನ್ನು ಸಮರ್ಥಿಸಿಕೊಂಡಿಲ್ಲ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ
"ಯಡಿಯೂರಪ್ಪರನ್ನು ಬಿಜೆಪಿ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ"
ಬೆಂಗಳೂರು: ನಾನು ಕುಕ್ಕರ್ ಬಾಂಬ್ ಸ್ಫೋಟ ಘಟನೆಯನ್ನು ಸಮರ್ಥಿಸಿಕೊಂಡಿಲ್ಲ. ಬಿಜೆಪಿ ಇಂತಹ ಘಟನೆಗಳನ್ನು ಬಳಸಿಕೊಂಡು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆ ಸೆಳೆಯುತ್ತಾರೆ. ಅದೇ ರೀತಿ ಭ್ರಷ್ಟಾಚಾರ, ಮತದಾರರ ಮಾಹಿತಿ ಕಳವು ವಿಚಾರವನ್ನು ಮುಚ್ಚಿಕೊಳ್ಳಲು ಈ ಪ್ರಕರಣ ಬಳಸಿಕೊಂಡಿದ್ದಾರೆ ಎಂದಷ್ಟೇ ಹೇಳಿದ್ದೇನೆ. ಅದನ್ನು ಬಿಟ್ಟು ಬಾಂಬ್ ಸ್ಫೋಟ ವಿಚಾರ ತನಿಖೆ ಮಾಡಬೇಡಿ ಎಂದು ಹೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ತಮ್ಮ ಪಕ್ಷದಲ್ಲಿನ ಭಿನ್ನಮತ ವಿಚಾರದ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದಾರೆ. ಇದನ್ನು ನಾನು ಹೇಳಿದ್ದೇನೆ ಎಂದರು.
ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸೌಹಾರ್ದ ಸ್ಥಾಪನೆ ಆಗಬೇಕಿದೆ. ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ. ಬಂಡವಾಳ ಬಂದಿದೆ ಎಂದು ಹೇಳುತ್ತಾರೆ. ಈ ಜಿಲ್ಲೆಗಳಲ್ಲಿ ಯಾವುದಕ್ಕೆ ಎಷ್ಟು ಬಂಡವಾಳ ಹೂಡಿಕೆ ಆಗುತ್ತಿದೆ ಎಂದು ಪಟ್ಟಿ ನೀಡಲಿ. ಉದ್ಯೋಗ ಸೃಷ್ಟಿ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಿ. ಮತ ಹಾಕಿರುವ ಜನರಿಗೆ ಈ ರೀತಿ ರಾಜಕಾರಣ ಮಾಡುತ್ತಾ ದ್ರೋಹ ಬಗೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಹಿಂದೆ ಬೆಂಗಳೂರಿನಲ್ಲಿ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರು. ಇಡೀ ವಿಶ್ವ ಬೆಂಗಳೂರಿನ ಕಡೆ ನೋಡುತ್ತಿರುವಾಗ ರಾಜ್ಯ ಭಯೋತ್ಪಾದಕರ ಕೇಂದ್ರ ಎನ್ನುವಂತೆ ಮಾತನಾಡಿದರೆ ರಾಜ್ಯದ ಘನತೆ ಹಾಳಾಗುತ್ತದೆ. ಭಯೋತ್ಪಾದನೆಗೆ ನಮ್ಮ ಪಕ್ಷದ ನಾಯಕರು ಬಲಿಯಾಗಿದ್ದಾರೆ. ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ನಾವು ಸದಾ ಬದ್ಧರಾಗಿದ್ದೇವೆ. ನಾವು ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಭಯೋತ್ಪಾದಕರ ಪರವಾಗಿದೆ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ' ಅವರು ತಮ್ಮ ಹೆಸರು ಮಾರುಕಟ್ಟೆಯಲ್ಲಿ ಓಡಬೇಕು ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ನಾನು ಅವರ ಭ್ರಷ್ಟಾಚಾರ, ಅಕ್ರಮ ಮುಚ್ಚಿಹಾಕುವ ಯತ್ನ, ರಾಜ್ಯಕ್ಕೆ ಆಗುತ್ತಿರುವ ದ್ರೋಹದ ಬಗ್ಗೆ ಮಾತನಾಡಿದ್ದೇನೆ' ಎಂದರು.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನಡುವಣ ಬಿಕ್ಕಟ್ಟಿನ ವಿಚಾರ ಮುಚ್ಚಿಕೊಳ್ಳಲು ನಿಮ್ಮ ಹೇಳಿಕೆ ತಿರುಚಿದ್ದಾರಾ ಎನ್ನುವ ಪ್ರಶ್ನೆಗೆ, 'ಹೌದು, ಅವರ ಪಕ್ಷದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ನಿನ್ನೆ ಯಡಿಯೂರಪ್ಪ ಅವರ ಮಾತಿನಲ್ಲಿ, ಅವರ ನೋವು, ದುಗುಡ ಎಲ್ಲವೂ ಅರ್ಥವಾಗುತ್ತಿತ್ತು. ಅವರನ್ನು ಪಕ್ಷದಲ್ಲಿ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈ ಸರಕಾರ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದಂತೆ ಯಡಿಯೂರಪ್ಪ ಅವರನ್ನೂ ಬಿಜೆಪಿಯವರು ಚುನಾವಣೆವರೆಗೂ ತಳ್ಳಿಕೊಂಡು ಹೋಗುತ್ತಿದ್ದಾರೆ' ಎಂದರು.
ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ' ಬಿಜೆಪಿಯವರು ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಆಪರೇಶನ್ ಕಮಲದಲ್ಲಿ ಅವರು ಡಾಕ್ಟರೇಟ್ ಪಡೆದಿರುವ ಪಂಡಿತರು. ಆದಷ್ಟು ಬೇಗ ಪಕ್ಷಕ್ಕೆ ಸೇರಿಸಿಕೊಳ್ಳಲಿ ' ಎಂದು ತಿಳಿಸಿದರು.
ಕಾಂಗ್ರೆಸ್ ಒಕ್ಕಲಿಗ ನಾಯಕರ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ, 'ನಮ್ಮ ಸಮಾಜದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾರಣಕ್ಕೆ ಮತ ನೀಡಬೇಕು ಎಂದು ಚರ್ಚೆ ಮಾಡಿದ್ದೇವೆ. ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳು, ನಾನಾ ಸಂಘಟನೆಗಳ ಮುಖಂಡರು ತಮ್ಮ ನೋವು ಹೇಳಿಕೊಂಡಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಬೇಕು ಎಂದು ಕೇವಲ ನಮ್ಮ ಸಮಾಜ ಮಾತ್ರವಲ್ಲ ಎಲ್ಲಾ ಸಮಾಜದವರು ಬೇಡಿಕೆ ಇಡುತ್ತಿದ್ದಾರೆ. ಭವಿಷ್ಯದ ಉದ್ದೇಶದಿಂದ ನಮ್ಮ ಸಮಾಜದವರು ಕೇಳುತ್ತಿದ್ದಾರೆ. ನಮ್ಮ ಮಠದ ಸ್ವಾಮೀಜಿಗಳು ಗಡುವು ನೀಡದ್ದಾರೆ. ಮಂತ್ರಿಗಳು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಪಾತ್ರ ಏನು ಎಂದು ಚರ್ಚೆ ಮಾಡಲಾಗಿದೆ. ನಮ್ಮ ಸಮಾಜದ ಹಕ್ಕು ಕೇಳಲು, ನಮ್ಮ ನಾಯಕರು ಸ್ವಾಮೀಜಿಗಳನ್ನು ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ ಮಾಡಲಾಗುವುದು. ಬೇರೆಯವರು ತಮ್ಮ ಹಕ್ಕು ಕೇಳಿದಂತೆ ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ. ಅದರಲ್ಲಿ ತಪ್ಪಿಲ್ಲ. ನಾನು ಪಕ್ಷದ ಅಧ್ಯಕ್ಷ ಆದರೂ ನಾನು ಒಕ್ಕಲಿಗ ಸಮುದಾಯದಿಂದ ಗುರುತಿಸಿಕೊಂಡಿದ್ದೇನೆ. ಎಲ್ಲೆಲ್ಲಿ ಅನ್ಯಾಯ ಆಗಿದೆಯೋ ಅಲ್ಲೆಲ್ಲ ಸರಿಪಡಿಸಲು ಪ್ರಯತ್ನ ಮಾಡಲಾಗುತ್ತದೆ' ಎಂದು ತಿಳಿಸಿದರು.