ಹುಬ್ಬಳ್ಳಿ: ಒಳ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಸಿಎಂ ಬೊಮ್ಮಾಯಿ ಪ್ರತಿಕೃತಿ ದಹಿಸಿ ಪ್ರತಿಭಟನೆ

Update: 2022-12-17 10:35 GMT

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನದ ಹೋರಾಟ ನಿರತರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ  ನಗರದ ಮಿನಿವಿಧಾನಸೌದ ಆವರಣ ಬಳಿ  ಸಮತಾ ಸೇನಾ, ವಿವಿಧ ದಲಿತ ಸಂಘಸಂಸ್ಥೆಗಳ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ  ಪ್ರತಿಕೃತಿ ದಹಿಸಿ  ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು, ನಂತರ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮತಾ ಸೇನಾ ರಾಜ್ಯಾದ್ಯಕ್ಷ ಗುರುನಾಥ ಉಳ್ಳಿಕಾಶ ಮಾತನಾಡಿ, ನ್ಯಾ. ಸದಾಶಿವ ಆಯೋಗ ವರದಿಯನ್ನು  ಯಥಾವತ್ತಾಗಿ ಅನುಷ್ಠಾನ ಮಾಡಬೇಕು. ಈಗಾಗಲೇ ಸಾಕಷ್ಟು ಬಾರಿ ಹೋರಾಟ ಮಾಡಲಾಗಿದೆ. ಈ ವರದಿಯನ್ನು ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ನ್ಯಾ. ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಮೂಲ ಪಂಚಮ ಪರಿಶಿಷ್ಟರು ತಮ್ಮ ಹಕ್ಕಿನ ಹೋರಾಟಕ್ಕಿಳಿದ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಖಂಡನೀಯವಾಗಿದ್ದು, ಈ ರೀತಿ ಧೋರಣೆಯನ್ನು ಮುಂದಿನ ದಿನಗಳವರೆವೆ ತಳ್ಳಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಉಳ್ಳಿಕಾಶಿ ಎಚ್ಚರಿಕೆ ನೀಡಿದರು.

ಮೀಸಲಾತಿಯನ್ವಯ ಮೂಲ ಪ.ಜಾ.ಗೆ ಇನ್ನೂ ಹೆಚ್ಚಿನ ಮೀಸಲು ಕಲ್ಪಿಸುವ ಉದ್ದೇಶ ಸರ್ಕಾರಕ್ಕಿದ್ದಲ್ಲಿ ಸ್ಪಷ್ಟಪಡಿಸುವಲ್ಲಿ ಇಲ್ಲವೇ ನೇರವಾಗಿ  'ಉಪಸಮಿತಿ' ಎಂಬ ಕಾಲಹರಣ ನೀತಿಯನ್ನು ಕೈಬಿಟ್ಟು ವರದಿಯನ್ನು ಬೆಳಗಾವಿ ಅಧಿವೇಶನಲ್ಲಿ ಅಂಗೀಕರಿಸಲಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಪಡಿಸುತ್ತೇವೆ ಎಂದರು.

ಇನ್ನೂ ಇದಕ್ಕೂ ಮುಂಚೆ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ  ಕೂಗಿ ದಲಿತ ವಿರೋಧಿ ಸರ್ಕಾರಕ್ಕೆ ದಿಕ್ಕಾರ ಎಂದು ತಮ್ಮ  ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ದಲಿತ ಮುಖಂಡರಾದ ಪ್ರೇಮನಾಥ ಚಿಕ್ಕತುಂಬಳ, ದೇವೆಂದ್ರಪ್ಪ ಇಟಗಿ, ಮಂಜುನಾಥ ಉಳ್ಳಿಕಾಶಿ, ರೇವಣಸಿದ್ದಪ್ಪ ಹೊಸಮನಿ, ಪ್ರಭು ಪ್ರಭಾಕರ,  ಲೋಹಿತ್ ಗಾಮನಗಟ್ಟಿ, ರಮೇಶ ಪವಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Similar News