ಕ್ಲೀನ್ ಚಿಟ್ ಸಿಕ್ಕಿದ್ದರೂ ನನ್ನನ್ನು ಯಾಕೆ ಸಂಪುಟಕ್ಕೆ ಸೇರಿಸಿಲ್ಲ: ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ ಈಶ್ವರಪ್ಪ
"ಬೆಳಗಾವಿಗೆ ಹೋಗುತ್ತಿದ್ದೇನೆ, ಅಧಿವೇಶನಕ್ಕೆ ಹೋಗಲ್ಲ"
ಬಾಗಲಕೋಟೆ: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಸಿಎಂ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಷನ್ ಪಡೆದ ಆರೋಪ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ದರೂ ನನ್ನನ್ನು ಯಾಕೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲಿಲ್ಲ ಎಂದು ಪ್ರಶ್ನಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಜನರು ಫೋನ್ ಮಾಡಿ ನಿಮ್ಮನ್ನೇಕೆ ಸಂಪುಟಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಇದರಿಂದ ಅವಮಾನ ಆಗುತ್ತಿದೆ. ಇದನ್ನು ಅರ್ಥ ಮಾಡಿಸಲು ಸೌಜನ್ಯದ ಪ್ರತಿಭಟನೆ ಮಾಡುತ್ತಿದ್ದೇನೆ. ಸಚಿವ ಸಂಪುಟಕ್ಕೆ ನನ್ನನ್ನು ತೆಗೆದುಕೊಳ್ಳದ್ದಕ್ಕೆ ಅಭಿಮಾನಿಗಳಿಗೆ ನೋವಾಗಿದೆ. ಇದು ನನಗೂ ನೋವುಂಟು ಮಾಡಿದೆ. ಆದ್ದರಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನದಿಂದ ದೂರ ಉಳಿಯುತ್ತೇನೆ ಎಂದು ಹೇಳಿದರು.
ಸಭಾಧ್ಯಕ್ಷರಿಂದ ಅನುಮತಿ ಪಡೆಯಲು ಬೆಳಗಾವಿಗೆ ಹೋಗುತ್ತಿದ್ದೇನೆ. ಆದರೆ, ಅಧಿವೇಶನಕ್ಕೆ ಹೋಗಲ್ಲ ಎಂದ ಅವರು, ಇವತ್ತಲ್ಲ ನಾಳೆ ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳುತ್ತಲೇ ಇದ್ದಾರೆ. ಯಾವ ಕಾರಣಕ್ಕೆ ತೆಗೆದುಕೊಳ್ಳುತ್ತಿಲ್ಲ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.