ಡಿ.ಕೆ.ಶಿವಕುಮಾರ್ ಮಾಲಕತ್ವದ ಶಿಕ್ಷಣ ಸಂಸ್ಥೆಯ ಮೇಲೆ ಸಿಬಿಐ ದಾಳಿ

Update: 2022-12-19 14:58 GMT

ಬೆಂಗಳೂರು, ಡಿ.19: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಲಕತ್ವದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಮೇಲೆ ಸೋಮವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ಡಿಕೆಶಿ ವಿರುದ್ಧ ಈ ನಡೆದಿದ್ದರೆ, ಐಶ್ವರ್ಯ ಅವರ ಆಸ್ತಿ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಿದೆ ಎನ್ನಲಾಗಿದೆ. ಈ ಫೌಂಡೇಶನ್‍ಗೆ ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದು, ಅವರ ಮಗಳು ಐಶ್ವರ್ಯ ಫೌಂಡೇಶನ್‍ನ ಕಾರ್ಯದರ್ಶಿಯಾಗಿದ್ದಾರೆ.

ಈ ಹಿಂದೆ ಕೂಡ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಮನೆ ಮೇಲೆ ಈ.ಡಿ, ಆದಾಯ ತೆರಿಗೆ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್ ಅವರು ಸದ್ಯ ವಿಚಾರಣೆ ಎದುರಿಸುತ್ತಿದ್ದಾರೆ. 

ಏನು ಅವಕಾಶವಿದೆಯೋ ಅದನ್ನು ಮಾಡಲಿ: ಡಿಕೆಶಿ 

ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಸಂಸ್ಥೆಯ ಮೇಲಿನ ಸಿಬಿಐ ದಾಳಿಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಡಿಕೆಶಿ ಅವರು, ಸಿಬಿಐ ಅಧಿಕಾರಿಗಳು ಸೋಮವಾರ ಬೆಂಗಳೂರಿನ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಟ್ರಸ್ಟಿಗಳನ್ನು ವಿಚಾರಣೆ ಮಾಡಿದ್ದಾರೆ. ಆದರೆ ಅವರು ಯಾವ ಮಾಹಿತಿ ಪಡೆದಿದ್ದಾರೆ ಗೊತ್ತಿಲ್ಲ. ಸರಕಾರ ಅವರಿಗೆ ತನಿಖೆ ಮಾಡುವ ಅಧಿಕಾರ ಕೊಟ್ಟಿದ್ದು, ಅವರು ಏನು ಮಾಡುತ್ತಾರೋ ಮಾಡಲಿ. ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನನ್ನ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದರು. ಅವರಿಗೆ ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆಯೋ ಅದನ್ನು ಮಾಡಲಿ ಎಂದರು. 

ಮನಸ್ಸಿಗೆ ಬಹಳ ನೋವಾಗಿದೆ: ಪದೇ ಪದೆ ದಾಳಿಯಿಂದ ವಿಚಲಿತರಾಗಿದ್ದೀರಾ ಎಂದು ಕೇಳಿದಾಗ, ‘ಮನಸ್ಸಿಗೆ ಬಹಳ ನೋವಾಗುತ್ತದೆ. ನನಗಿಂತ ನನ್ನ ಜತೆ ವ್ಯಾಪಾರ, ವ್ಯವಹಾರ ಮಾಡಿದ ಜನರಿಗೆ ತೊಂದರೆ ನೀಡುತ್ತಿರುವುದು ನೋವು ತಂದಿದೆ. ಒಬ್ಬ ವಕೀಲರಿಗೆ 5 ಲಕ್ಷ ಶುಲ್ಕ ನೀಡಿದ್ದೆ. ಅವರಿಗೆ ಸಮನ್ಸ್ ನೀಡಿದ್ದಾರೆ. ನಾನು ಪ್ರವಾಸಕ್ಕೆ ನನ್ನ ಸ್ನೇಹಿತನನ್ನು ಅಮೆರಿಕಕ್ಕೆ ಕಳುಹಿಸಿದ್ದೆ. ಆ ಟ್ರಾವೆಲ್ ಏಜೆಂಟ್ ಗೆ ನೊಟೀಸ್ ನೀಡಿದ್ದಾರೆ. ಇನ್ನು ಎಷ್ಟು ಜನಕ್ಕೆ ನೋಟೀಸ್ ನೀಡಿದ್ದಾರೆ ಎಂಬುದರ ಬಗ್ಗೆ ಪಟ್ಟಿ ನೀಡಲು ಹೋಗುವುದಿಲ್ಲ’ ಡಿಕೆಶಿ ಅವರು ಹೇಳಿದರು. 

ಬಿಜೆಪಿ ನಾಯಕರ ಮೇಲೆ ತನಿಖೆ ಯಾಕಿಲ್ಲ: ಸಿಬಿಐ ಸ್ವಾಯತ್ತ ಸಂಸ್ಥೆ, ಅದು ಅದರ ಕೆಲಸ ಮಾಡುತ್ತಿದೆ. ಅದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ಏನಾದರೂ ಹೇಳಲಿ. ಅವರ ಮಂತ್ರಿಗಳು, ನಾಯಕರ ಮೇಲೂ ಇಂತಹದೇ ಪ್ರಕರಣಗಳಿವೆ. ಅವರ ಪ್ರಕರಣಗಳನ್ನು ಸಿಬಿಐಗೆ ಯಾಕೆ ನೀಡಿಲ್ಲ. ಸ್ಪೀಕರ್ ಅವರ ಕಚೇರಿಗೆ ಪತ್ರ ಬರೆದಿದ್ದಾರೆ. ಮೊನ್ನೆ ಸಂಸದ ಶ್ರೀನಿವಾಸ್ ಪ್ರಸಾದ್ ಹಣದ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಹಿಂದೆಯೂ ಪ್ರತಾಪ್ ಸಿಂಹ ಭಾಷಣ ಮಾಡುತ್ತಾ ವಿವಿ ಕುಲಪತಿ ಹುದ್ದೆಗೆ 3-5 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಕುಲಪತಿಗಳನ್ನು ನೇಮಕ ಮಾಡುವ ರಾಜ್ಯಪಾಲರ ಕಚೇರಿ ಮೇಲೆ ಸಂಸದರು ಇಂತಹ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಬೊಮ್ಮಾಯಿ ಅವರು ಸಿಬಿಐ ಅಥವಾ ಈಡಿ ತನಿಖೆಗೆ ಯಾಕೆ ನೀಡಿಲ್ಲ? ಸಂಸದ ನೇರವಾಗಿ ಹೇಳಿದ್ದಾರೆ. ಈ ಹಿಂದೆ ವಿಸಿ ಆಗಲು ಪ್ರೊಫೆಸರ್ ಒಬ್ಬರು ಹಣ ನೀಡಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಯಾಕೆ ತನಿಖೆ ನಡೆದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದರು.

Similar News