ಕೊರಟಗೆರೆ: ಶವ ಸಂಸ್ಕಾರಕ್ಕೆ ಜಾಗದ ಕೊರತೆ; ಗ್ರಾ.ಪಂ ಎದುರು ಶವವಿಟ್ಟು ಪ್ರತಿಭಟನೆ, ಆಕ್ರೋಶ

Update: 2022-12-19 15:40 GMT

ತುಮಕೂರು, ಡಿ,19: ಶವ ಸಂಸ್ಕಾರಕ್ಕೆ ಜಾಗವಿಲ್ಲದೇ ವೃದ್ಧೆಯ ಶವವಿಟ್ಟು ಕುಟುಂಬಸ್ಥರು ಗ್ರಾಮ ಪಂಚಾಯತ್ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿರುವ ಘಟನೆ  ಕೊರಟಗೆರೆ ತಾಲೂಕು ಇರಕಸಂದ್ರ ಕಾಲನಿಯಲ್ಲಿ ನಡೆದಿದೆ. 

ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರಕಸಂದ್ರ ಕಾಲನಿಯ ವೆಂಕಟಮ್ಮ (80) ವರ್ಷ ಸಾವನ್ನಪ್ಪಿದರು. ಇವರ ಶವ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ, ಕಳೆದ 25 ಗಂಟೆಗಳಿಂದ ಶವವನ್ನು ಮನೆಯಲ್ಲಿಯೇ ಇಟ್ಟು ದಿಕ್ಕು ಕಾಣದೇ ಪರದಾಡುತ್ತಿದ್ದಾರೆನ್ನಲಾಗಿದೆ. 

'ಇರಕಸಂದ್ರ ಕಾಲನಿಯಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಕುಟುಂಬಗಳಿದ್ದು, ಒಬ್ಬರಿಗೂ ಭೂಮಿ ಇಲ್ಲ. ಈ ಹಿಂದೆ ಯಾರಾದರು ಸತ್ತರೆ ಗ್ರಾಮದ ಕೆರೆ ಅಂಗಳದಲ್ಲೋ,ಇಲ್ಲ ರಸ್ತೆ ಬದಿಯಲ್ಲೋ ಮಣ್ಣು ಮಾಡುತ್ತಿದ್ದರು, ಕಳೆದ ನಾಲ್ಕೈದು ವರ್ಷಗಳಿಂದ ಚನ್ನಾಗಿ ಮಳೆಯಾಗುತ್ತಿದ್ದು, ಕೆರೆ,ಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಮಣ್ಣಿಗೆ ಅವಕಾಶವಿಲ್ಲ.ಗುಡ್ಡದಲ್ಲಿ ಮಣ್ಣು ಮಾಡಲು ಜಮೀನಿನವರು ಬೇಲಿ ನಿರ್ಮಿಸಿಕೊಂಡಿರುವ ಕಾರಣ ಹೋಗಲು ಆಗುತ್ತಿಲ್ಲ.ಹೀಗಾಗಿ ಶವ ಸಂಸ್ಕಾರಕ್ಕೆ ಜಾಗ ನೀಡುವಂತೆ ಗ್ರಾಮ ಪಂಚಾಯತ್ ಸದಸ್ಯರು,ಅಧಿಕಾರಿಗಳನ್ನು ಕೇಳಿದರೆ, ಅವರಿಂದಲೂ ಸಮರ್ಪಕ ಉತ್ತರವಿಲ್ಲ. ಹಾಗಾಗಿ ಶವವನ್ನು ಗ್ರಾ.ಪಂ ಮುಂದೆ ಇಟ್ಟು ಪ್ರತಿಭಟಿಸುವುದಾಗಿ' ಇರಕಸಂದ್ರ ಕಾಲನಿಯ ಮುಖಂಡರು ಹಾಗು ಗ್ರಾಮಸ್ಥರು ತಿಳಿಸಿದ್ದಾರೆ. 

ಹತ್ತಾರು ವರ್ಷಗಳಿಂದ ಸ್ಮಶಾನಕ್ಕಾಗಿ ಗ್ರಾಮಸ್ಥರು ಮನವಿ ಮಾಡಿದ್ದರೂ ತಲೆ ಕೊಳ್ಳದ ಅಧಿಕಾರಿಗಳು,ಸ್ಮಶಾನಕ್ಕಾಗಿ ಒಂದು ಎಕರೆ ಭೂಮಿ ಮಂಜೂರು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಸದರಿ ಜಮೀನು ಸಂಪೂರ್ಣ ಕಲ್ಲು ಬಂಡೆಯಾಗಿದ್ದು, ಇಲ್ಲಿ ಶವ ಸಂಸ್ಕಾರ ಸಾಧ್ಯವಿಲ್ಲ. ಅಧಿಕಾರಿಗಳು ಸೂಕ್ತ ಜಾಗ ತೋರಿಸುವವರೆಗೂ ಶವವನ್ನು ಗ್ರಾ.ಪಂ ಮುಂದೆ ಇಡುವುದಾಗಿ ಮೃತರ ಮಗಳಾದ ಪಟ್ಟಮ್ಮ, ಸಂಬಂಧಿಕರಾದ ರಾಮಕೃಷ್ಣಯ್ಯ, ಗಂಗಮ್ಮ ತಿಳಿಸಿದ್ದಾರೆ.

Similar News