ಸುಪ್ರೀಂ ಕೋಟ್೯ ಆದೇಶ; ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಜಾಮೀನಿನ ಮೇಲೆ ಬಿಡುಗಡೆ

ಮೈಸೂರು ಕೇಂದ್ರ ಕಾರಾಗೃದಲ್ಲಿ ಬಂಧಿತನಾಗಿದ್ದ ಜ್ಞಾನಪ್ರಕಾಶ್

Update: 2022-12-20 05:58 GMT

ಮೈಸೂರು, ಡಿ.20: ಟಾಡಾ ಪ್ರಕರಣದಲ್ಲಿ ಬಂಧಿತನಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಅವರು ಜಾಮೀನಿನ ಮೇಲೆ ಮಂಗಳವಾರ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು.

ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗದ್ದ ಎಂದು ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಅವರನ್ನು ಕಳೆದ 29 ವರ್ಷಗಳ ಹಿಂದೆಯೇ ಬಂಧಿಸಿ ಜೈಲಿನಲ್ಲಿಡಲಾಗಿತ್ತು.

ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜ್ಞಾನಪ್ರಕಾಶ್ ಅವರಿಗೆ ಸುಪ್ರೀಂ ಕೋಟ್೯ ಮಾನವೀಯ ಆಧಾರದ ಮೇಲೆ ನ.26 ರಂದು ಜಾಮೀನು ಮಂಜೂರು ಮಾಡಿತ್ತು.

ಸುಪ್ರೀಂ ಕೋಟ್೯ ಆದೇಶದನ್ವಯ ಮೈಸೂರಿನ ವಕೀಲ ಬಾಬುರಾಜ್  ಅವರು ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಜ್ಞಾನಪ್ರಕಾಶ್ ಬಿಡುಗಡೆಗೆ ಅನುಮತಿ ನೀಡುವಂತೆ ಅರ್ಜಿಸಲ್ಲಿಸಿದ್ದರು. ಸೋಮವಾರ ಇಬ್ಬರಿಂದ ಶ್ಯೂರಿಟಿ ಹಾಗೂ 5 ಲಕ್ಷದ ಬಾಂಡ್ ಅನ್ನು ನ್ಯಾಯಾಲಯವು ಪಡೆದಿತ್ತು. ನಂತರ ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಅವರಿಗೆ ಜ್ಞಾನಪ್ರಕಾಶ್ ಅವರನ್ನು ಬಿಡುಗಡೆ ಮಾಡುವಂತೆ ಕೋಟ್೯ ಆದೇಶ ನೀಡಿತ್ತು.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಹಳ್ಳಿ ಸಂದನಾಪಾಳ್ಯದ ಜ್ಞಾನಪ್ರಕಾಶ್ 1993 ರ ಪಾಲಾರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಭಾಗಿಯಾಗಿದ್ದರು ಎಂದು ಟಾಡಾ ಕಾಯ್ದೆಯಡಿ ಮೈಸೂರಿನ ಟಾಡಾ ನ್ಯಾಯಾಲಯವು 1997 ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.  2014  ರಲ್ಲಿ ಸುಪ್ರೀಂ ಕೋಟ್೯ ಜೀವಾವಧಿಗೆ ಇಳಿಸಿ ತೀರ್ಪು ನೀಡಿತ್ತು. ವೀರಪ್ಪನ್ 2004 ರ ಅಕ್ಟೋಬರ್ 18 ರಂದು ಎನ್ ಕೌಂಟರ್ ನಲ್ಲಿ ಮೃತಪಟ್ಟರೆ, ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸೈಮನ್, ಬಿಲವೇಂದ್ರನ್ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. 

ಕಳೆದ 29 ವರ್ಷಗಳಿಂದ ಬೆಳಗಾವಿಯ ಹಿಂಡಲಗ ಹಾಗೂ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ 68 ವರ್ಷದ ಜ್ಞಾನಪ್ರಕಾಶ್, ಒಂದೂವರೆ ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರಿಗೆ ಬೆಂಗಳೂರಿನ ಕಿದ್ವಾಯಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿನ್ನಲೆಯಲ್ಲಿ ವಕೀಲರಾದ ವಿಕ್ರಂ ಹಾಗೂ ಭಾರತಿ ಅವರು ಸುಪ್ರೀಂ ಕೋಟ್೯ ನಲ್ಲಿ ಜ್ಞಾನಪ್ರಕಾಶ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಬಿಡುಗಡೆಗೆ ಪುರಸ್ಕರಿಸಿದೆ.

Similar News