ಗಡಿ ವಿಚಾರ; ವಿಧಾನಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ವಿರುದ್ಧ ಖಂಡನಾ ನಿರ್ಣಯ
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.20: ‘ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿ, ಕೇಂದ್ರ ಸರಕಾರಕ್ಕೆ ಕಳುಹಿಸೋಣ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಕುರಿತು ಬುಧವಾರ(ಡಿ.21) ಉತ್ತರ ನೀಡುವ ವೇಳೆ ಒಮ್ಮತದ ನಿರ್ಣಯವೊಂದನ್ನು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ರವಾನಿಸೋಣ ಎಂದು ಹೇಳಿದರು.
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಿದ್ದ ಸಭೆಯಲ್ಲಿ ನಾನು ಜವಾಬ್ದಾರಿಯಿಂದಲೆ ಮಾತನಾಡಿದ್ದೇನೆ. ಮಹಾರಾಷ್ಟ್ರ ಸರಕಾರಕ್ಕೂ ತೀಕ್ಷ್ಣ ಉತ್ತರ ನೀಡಿದ್ದೇನೆ. ಮಹಾರಾಷ್ಟ್ರದ ಸಚಿವರು ನಮ್ಮ ರಾಜ್ಯಕ್ಕೆ ಬರದಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಮಾಹಿತಿ ನೀಡಲಾಗಿದೆ.
ಅಲ್ಲಿನ ಸಂಸದರ ಗಡಿ ಪ್ರವೇಶಕ್ಕೂ ಅವಕಾಶ ನೀಡಿಲ್ಲ. ಅಲ್ಲದೆ, ಪ್ರತಿ ವರ್ಷ ಇಲ್ಲಿನ ಅಧಿವೇಶನದ ಮೊದಲ ದಿನ ಎಂಇಎಸ್ ಮಹಾಮೇಳಾವ್ ನಡೆಸುತ್ತಿದ್ದರೂ, ಈ ಬಾರಿ ಅದಕ್ಕೂ ಅವಕಾಶ ನೀಡಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
ದಿಟ್ಟ ನಿಲುವು ತಾಳಬೇಕು:‘ ಗಡಿ ವಿಚಾರದಲ್ಲಿ ರಾಜ್ಯದ ಜನರಿಗೆ ಯಾವುದೇ ಸಂಶಯ ಬರಬಾರದು, ರಾಜ್ಯ ಸರಕಾರ ಗಡಿ ವಿಚಾರದಲ್ಲಿ ದಿಟ್ಟ ನಿಲುವನ್ನು ತಾಳಬೇಕು. ಮಹಾರಾಷ್ಟ್ರಕ್ಕೆ ಒಂದಿಂಚೂ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂಬುದು ಸರಕಾರದ ನಿಲುವಾಗಿರಬೇಕು’ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದರು.
ಆರಂಭಕ್ಕೆ ಮಾತನಾಡಿದ ಅವರು, ಪ್ರಸ್ತುತ ವರ್ಷದ ನ.23ರಂದು ಈ ಪ್ರಕರಣವು ಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಯಾವುದೇ ಒಂದು ಹಳ್ಳಿಯನ್ನು ಕರ್ನಾಟಕಕ್ಕೆ ಬಿಟ್ಟುಕೊಡಲು ನಾವು ಸಿದ್ಧರಿಲ್ಲ ಎಂಬ ಹೇಳಿಕೆಗಳನ್ನು ನೀಡಲು ಆರಂಭ ಮಾಡಿದರು ಎಂದರು.
ಸದನ ಆರಂಭವಾದ ದಿನದಿಂದ ಎಂಇಎಸ್ ಮಹಾಮೇಳವ್ ಆಯೋಜನೆ ಮಾಡುವುದು, ನ.1 ಅನ್ನು ಕಪ್ಪುದಿನವಾಗಿ ಆಚರಣೆ ಮಾಡುವುದು ಮಾಡುತ್ತಾ ಬಂದಿದ್ದಾರೆ. ಸಾಂಗ್ಲಿ ಜಿಲ್ಲೆಯ ಕನ್ನಡಿಗರಿಗೆ ತೊಂದರೆ ಕೊಡುವುದು, ಅವರ ಊರುಗಳಿಗೆ ನೀರು ಕೊಡದಿರುವುದು, ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಜನರನ್ನು ಸಂಕಷ್ಟದಲ್ಲಿ ಬದುಕುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 40 ಹಳ್ಳಿಗಳು ಕರ್ನಾಟಕಕ್ಕೆ ಸೇರಲು ನಿರ್ಣಯ ಅಂಗೀಕರಿಸಿವೆ. ಇವರಿಗೆ ದೇಶದ್ರೋಹದ ಕೇಸ್ ದಾಖಲಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ. ವಿವಾದವೇ ಇಲ್ಲದಿರುವುದನ್ನು ವಿವಾದವಿದೆ ಎಂದು ಬಿಂಬಿಸಲು ಹೊರಟಿರುವ ಇಂಥಾ ಸಂದರ್ಭದಲ್ಲಿ ರಾಜ್ಯ ಸರಕಾರ ಒಳ್ಳೆ ಲಾಯರ್ ಅವರನ್ನು ನೇಮಿಸಿ ವಾದ ಮಾಡಿಸಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿ ನಡುವೆ ನಡೆಸಿದ ಸಂಧಾನ ಸಭೆಗೆ ಬಸವರಾಜ ಬೊಮ್ಮಾಯಿ ಹೋಗಬಾರದಿತ್ತು. ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರದಲ್ಲಿ ತ್ರಿಪಲ್ ಇಂಜಿನ್ ಸರಕಾರ ಇದೆ. ಇಂಥಾ ಸಂದರ್ಭದಲ್ಲಿ ಬಿಕ್ಕಟ್ಟನ್ನು ನಿವಾರಣೆ ಮಾಡುವುದು ಕೇಂದ್ರ ಸರಕಾರದ ಕೆಲಸ. ಮಹಾರಾಷ್ಟ್ರದವರಿಗೆ ಕರೆದು ಇದರ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿದೆ, ಹಾಗಾಗಿ ನೀವು ಇಂಥಾ ಪುಂಡಾಟಗಳನ್ನು ನಿಲ್ಲಿಸಿ ಎಂದು ಕೇಂದ್ರ ಸರಕಾರ ಬುದ್ದಿ ಹೇಳಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಏಕನಾಥ್ ಶಿಂಧೆ ಸರಕಾರ ಬೆಳಗಾವಿಗೆ ತನ್ನ 3 ಜನ ಮಂತ್ರಿಗಳನ್ನು ಕಳಿಸಿಕೊಡುವುದಾಗಿ ಹೇಳಿತ್ತು. ಸರಕಾರ ಆ ಸಂದರ್ಭದಲ್ಲಿ 144 ಸೆಕ್ಷನ್ ಹಾಕಿ ಅವರು ಬರದಂತೆ ಮಾಡಿದೆ, ನಾವು ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಅವರನ್ನು ಬರದಂತೆ ತಡೆದಿದ್ದೆವು. ಈಗ ಮಹಾರಾಷ್ಟ್ರದ ಮೂರು ಸಚಿವರು ಮತ್ತು ಕರ್ನಾಟಕದ ಮೂವರು ಮಂತ್ರಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ, ಆದರೆ ಇದಕ್ಕೆ ರಾಜ್ಯ ಸರಕಾರ ಒಪ್ಪಬಾರದಿತ್ತು ಎಂದು ಅವರು ತಿಳಿಸಿದರು.
‘ಮಹಾರಾಷ್ಟ್ರ ಸರಕಾರ ಸರ್ವಪಕ್ಷ ಸಭೆ ಮಾಡಿದೆ, ರಾಜ್ಯದಲ್ಲೂ ಸಿಎಂ ಸರ್ವಪಕ್ಷ ಸಭೆ ಕರೆಯುವುದಾಗಿ ಹೇಳಿ, ಸಭೆಯನ್ನು ಕರೆಯಲಿಲ್ಲ, ಅಮಿತ್ ಶಾ ಭೇಟಿ ಮಾಡುವ ಮೊದಲು ಮುಖ್ಯಮಂತ್ರಿ ಸರ್ವಪಕ್ಷ ಸಭೆ ಕರೆದಿದ್ದರೆ,ಇನ್ನಷ್ಟು ಶಕ್ತಿ ಬರುತ್ತಿತ್ತು. ಸರಕಾರದ ಜೊತೆ ನಾವಿದ್ದೇವೆ ಎಂಬ ಧೈರ್ಯ ತುಂಬುತ್ತಿದ್ದೆವು’
-ಸಿದ್ಧರಾಮಯ್ಯ ಪ್ರತಿಪಕ್ಷ ನಾಯಕ