ದಲಿತ ಮಹಿಳೆ ಸೇರಿ ಒಳಮೀಸಲಾತಿ ಹೋರಾಟಗಾರರ ವಿರುದ್ಧ ಮೊಕದ್ದಮೆ

Update: 2022-12-20 17:03 GMT

ಬೆಂಗಳೂರು, ಡಿ.20: ನ್ಯಾ.ಎ.ಜೆ ಸದಾಶಿವ ಆಯೋಗ ವರದಿಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ  ಹೋರಾಟ ಮುಂದುವರೆಸಿರುವ ದಲಿತ ಮಹಿಳೆ ಸೇರಿ ಹಲವು ನಾಯಕರ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ  ಮೊಕದ್ದಮೆ ದಾಖಲಾಗಿದೆ.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ‌ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಡಿ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಗೂ ಮುನ್ನ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ‌ ಕೋರ್ಟಿನ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಹತ್ತು  ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲು ಮಾಡಲಾಗಿದೆ.

ಹೋರಾಟ ಸಮಿತಿಯ ಶಿವರಾಯ ಅಕ್ಕರಕಿ,  ಅಂಬಣ್ಣ ಅರೋಲಿಕರ್, ಮಾದಿಗ ಪಾವಗಡ ಶ್ರೀರಾಮ್,  ಶಂಕರ್ ಪೂಜಾರಿ,  ಭಾಸ್ಕರ್ ಪ್ರಸಾದ್, ಎನ್.ಮರ‍್ತಿ, ಬಿ.ಗೋಪಾಲ್, ಹೆಣ್ಣೂರ್ ಶ್ರೀನಿವಾಸ್, ಭಾಗ್ಯಮ್ಮ,  ಲಿಂಗರಾಜು ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?: 

ಡಿ.11ರಂದು ಒಳಮೀಸಲಾತಿ ಹೋರಾಟಗಾರರು ತಮ್ಮ ನೇತೃತ್ವದಲ್ಲಿ ಸುಮಾರು ಮೂರು ಜನರ ಅಕ್ರಮ ಕೂಟ ಸೇರಿಸಿಕೊಂಡು ರೈಲ್ವೆ ನಿಲ್ದಾಣದ ಆರ್‌ಎಂಎಸ್ ಗೇಟ್ ಮುಂಭಾಗದಲ್ಲಿ, ಶಾಂತಲಾ ರ‍್ಕಲ್‌ನಿಂದ ಖೋಡೆ ರ‍್ಕಲ್ ಕಡೆಗೆ ಹೋಗುವ ಸರ‍್ವಜನಿಕ ಮುಖ್ಯ ರಸ್ತೆಯ ವಾಹನಗಳನ್ನು ತಡೆದಿದ್ದಾರೆ. ಮೆರವಣಿಗೆ ಮಾಡಲು ಏಕಾಏಕಿ ಬಂದು ಕೂಗಾಟ ನಡೆಸಿದ್ದಾರೆ ಎಂದು ದೂರಲಾಗಿದೆ.

ಸಾರ್ವಜನಿಕರ ಸಂಚಾರಕ್ಕೆ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಸಂಬಂಧ ನ್ಯಾಯಾಲಯ ಆದೇಶದ ಉಲ್ಲಂಘನೆ ಹಿನ್ನೆಲೆ ಮೊಕದ್ದಮೆ ದಾಖಲು ಮಾಡಲಾಗಿದೆ.

ಪ್ರಮುಖ ಆರೋಪಿ ಮುಖ್ಯಮಂತ್ರಿ: ಅಂಬಣ್ಣ

ಡಿ.11ರಂದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟಿಸುವ ವಿಷಯವನ್ನು ಒಂದು ತಿಂಗಳ ಮೊದಲೇ ಮುಖ್ಯಮಂತ್ರಿಯನ್ನು ಒಳಗೊಂಡಂತೆ ಸಚಿವರು ಹಾಗೂ ಪೊಲೀಸ್ ಇಲಾಖೆಗೂ ಮಾಹಿತಿ ತಲುಪಿಸಿದ್ದೆವು. ನಾವು ನಗರದೊಳಗೆ ಬರದಂತೆ ಸಮಸ್ಯೆ ಬಗೆಹರಿಸಿ ವಾಪಸ್ ಕಳುಹಿಸಬಹುದಿತ್ತು. ಇದಕ್ಕೆ ಅವರೇ ಹೊಣೆಗಾರರು. ಸಾರ್ವಜನಿಕವಾಗಲಿ,ವಾಣಿಜ್ಯೋದ್ಯಮಗಳಾಗಲಿ ಪ್ರತಿಭಟನೆಯಿಂದ ತೊಂದರೆಯಾಗಿದೆಯೆಂದು ಪ್ರಕರಣ ದಾಖಲಿಸಿಲ್ಲ.

ಕುಮ್ಮಕ್ಕಿನಿಂದ ಪೊಲೀಸರೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಆದರೆ, ನಮ್ಮ ಹೋರಾಟಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಆರೋಪಿ ಮಾಡಬೇಕು ಎಂದು ಒಳಮೀಸಲಾತಿ ಹೋರಾಟದ  ನಾಯಕ ಅಂಬಣ್ಣ ಅರೋಲಿಕರ್ ತಿಳಿಸಿದರು.

Similar News