ರಾಜ್ಯಸಭೆ ಮಾದರಿಯಂತೆ ಪರಿಷತ್ ಸದನದಲ್ಲಿ ಪ್ರಶ್ನೋತ್ತರ: ನೂತನ ಸಭಾಪತಿ ಹೊರಟ್ಟಿ
ಬೆಳಗಾವಿ, (ಸುವರ್ಣಸೌಧ) ಡಿ.21: ರಾಜ್ಯಸಭಾ ಮಾದರಿಯಲ್ಲಿಯೇ ಪರಿಷತ್ತಿನ ಸದನದಲ್ಲೂ ಪ್ರಶ್ನೋತ್ತರ ಪ್ರಕ್ರಿಯೆ ನಡೆಸಲಾಗುವುದು ಎಂದು ವಿಧಾನ ಪರಿಷತ್ತಿನ ನೂತನ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಪ್ರಕಟಿಸಿದರು.
ವಿಧಾನ ಪರಿಷತ್ತಿನಲ್ಲಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸದನದಲ್ಲಿ ಸದಸ್ಯರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಲವು ಸದಸ್ಯರು ರಾಜ್ಯಸಭಾ ಮಾದರಿಯಲ್ಲಿ ಪ್ರಶ್ನೋತ್ತರ ಕಲಾಪ ನಡೆಸುವಂತೆ ಕೋರಿದ್ದಾರೆ. ಅದರಂತೆ ಕಾರ್ಯನಿರ್ವಹಿಸಲು ಸಿದ್ಧ ಎಂದು ತಿಳಿಸಿದರು.
ಕಳೆದ ಒಂದು ಶತಮಾನದ ಅವಧಿಯಲ್ಲಿ ಚಿಂತಕರ ಚಾವಡಿ, ಪ್ರಾಜ್ಞರ ಮನೆ ಎಂಬ ಹೆಗ್ಗಳಿಗೆ ಹೊಂದಿರುವ ಕರ್ನಾಟಕ ವಿಧಾನಪರಿಷತ್ತು ನಮ್ಮ ರಾಜ್ಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಕಟ್ಟುವ ನಿಟ್ಟಿನಲ್ಲಿ ಕಾಲ-ಕಾಲಕ್ಕೆ ಸರಕಾರಕ್ಕೆ ಬೇಕಾದಂತಹ ಅಗತ್ಯವಾದ ಸಲಹೆಗಳನ್ನು ಹಾಗೂ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ.
ಹಿರಿಯರ ಮನೆಯ ಗಾಂಭಿರ್ಯತೆ, ಘನತೆ ಹಾಗೂ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕ್ರಮಗಳನ್ನು ಕೈಗೊಳ್ಳುವದರ ಜೊತೆಗೆ ಸದನದಲ್ಲಿನ ಚರ್ಚೆಗಳು ಅರ್ಥಪೂರ್ಣವಾಗಿರಬೇಕು ಹಾಗೂ ಸಮಾಜಮುಖಿಯಾಗಿರಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಅತ್ಯಂತ ಉತ್ಸಾಹದಿಂದ ದೇಶದ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಯ ಮಾದರಿಯಲ್ಲಿ ಸದನವನ್ನು ಕ್ರಿಯಾಶೀಲವಾಗಿ ಮತ್ತು ಸಂಸದೀಯ ಮೌಲ್ಯಗಳ ಆಧಾರದ ಮೇಲೆ ಶಾಸನಸಭೆಯ ನಿಯಮಾವಳಿ ಅಡಿಯಲ್ಲಿ ಮುನ್ನಡೆಸುವ ಆಶಯಕ್ಕೆ ಬದ್ಧನಾಗಿದ್ದೇನೆ ಎಂದು ಹೊರಟ್ಟಿ ನುಡಿದರು.
ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ: ಸಭಾಪತಿಯಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರು ಬಿಜೆಪಿ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸದನಕ್ಕೆ ತಿಳಿಸಿದರು. ಈ ವೇಳೆ ವಿಪಕ್ಷ ಸದಸ್ಯರು ಮೇಜು ತಟ್ಟಿ ಸಭಾಪತಿ ನಿಲುವು ಸ್ವಾಗತಿಸಿದರು.